ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಪಿ.ವಿ. ಸಿಂಧು ಅಲಭ್ಯ
ಪಿ.ವಿ. ಸಿಂಧು | PTI
ಹೊಸದಿಲ್ಲಿ: ಮಂಜಿರಜ್ಜು ಸಮಸ್ಯೆಯಿಂದ ಬಳಲುತ್ತಿರುವ ಎರಡು ಬಾರಿಯ ಒಲಿಂಪಿಕ್ಸ್ ಮೆಡಲಿಸ್ಟ್ ಪಿ.ವಿ. ಸಿಂಧು ಚೀನಾದಲ್ಲಿ ನಡೆಯಲಿರುವ ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ ಹೆಚ್ಚಿನ ಪದಕ ಗೆಲ್ಲುವ ಭಾರತದ ವಿಶ್ವಾಸಕ್ಕೆ ದೊಡ್ಡ ಹೊಡೆತ ಬಿದ್ದಿದೆ.
‘‘2025ರ ಆವೃತ್ತಿಯ ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ತಂಡದೊಂದಿಗೆ ನಾನು ಪ್ರಯಾಣಿಸುವುದಿಲ್ಲ ಎಂದು ತಿಳಿಸಲು ತುಂಬಾ ಬೇಸರವಾಗುತ್ತಿದೆ. ಗುವಾಹಟಿಯಲ್ಲಿ ಫೆ.4ರಂದು ತರಬೇತಿಯಲ್ಲಿ ನಿರತವಾಗಿದ್ದಾಗ ಮಂಡಿರಜ್ಜಿನಲ್ಲಿ ಮುರಿತವಾಗಿದೆ. ಎಂಆರ್‌ಐ ಸ್ಕ್ಯಾನಿಂಗ್‌ನಲ್ಲಿ ನನ್ನ ಚೇತರಿಕೆಯು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತಗಲಲಿದೆ’’ ಎಂದು 29ರ ಹರೆಯದ ಸಿಂಧು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೆಬ್ರವರಿ 11ರಿಂದ 16ರ ತನಕ ಚೀನಾದ ಕ್ವಿಂಗ್‌ಡಾವೊದಲ್ಲಿ ನಡೆಯಲಿದೆ. ಭಾರತೀಯ ಶಟ್ಲರ್‌ಗಳು ಸದ್ಯ ಗುವಾಹಟಿಯಲ್ಲಿ ಶಿಬಿರದಲ್ಲಿ ತರಬೇತಿ ನಡೆಸುತ್ತಿದ್ದಾರೆ. ಸಿಂಧು ಹೊರತುಪಡಿಸಿ ಇತರ ಪ್ರಮುಖ ಆಟಗಾರರಾದ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್ ಜೊತೆಗೆ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಶಿಬಿರದಲ್ಲಿದ್ದಾರೆ.
ಈ ಹಿಂದಿನ ಆವೃತ್ತಿಯ ಪಂದ್ಯಾವಳಿಯಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡದಲ್ಲಿ ಸಿಂಧು ಇದ್ದರು.
ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ತನ್ನ ಚೊಚ್ಚಲ ಚಿನ್ನದ ಪದಕವನ್ನು ಜಯಿಸಿದ ನಂತರ ಸಿಂಧು ಪದೇ ಪದೇ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಗೇಮ್ಸ್ ವೇಳೆ ಎಡಬಲಗಾಲಿನ ಗಾಯಕ್ಕೆ ಒಳಗಾಗಿದ್ದ ಸಿಂಧು 2022ರ ಇನ್ನುಳಿದ ಟೂರ್ನಿಗಳಿಂದ ಹೊರಗುಳಿದಿದ್ದರು. ಇದರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಹಾಗೂ ವರ್ಲ್ಡ್ ಟೂರ್ ಫೈನಲ್ಸ್‌ಗೆ ಕೂಡ ಸೇರಿದ್ದವು.
ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವು ‘ಡಿ’ ಗುಂಪಿನಲ್ಲಿ ರನ್ನರ್ಸ್ ಅಪ್ ದಕ್ಷಿಣ ಕೊರಿಯಾ ಹಾಗೂ ಮಕಾವು ತಂಡದೊಂದಿಗೆ ಸ್ಥಾನ ಪಡೆದಿದೆ.ಫೆಬ್ರವರಿ 12ರಂದು ಮಕಾವು ತಂಡದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಆ ನಂತರ ದಕ್ಷಿಣ ಕೊರಿಯಾ ವಿರುದ್ಧ ಫೆಬ್ರವರಿ 13ರಂದು ಕಠಿಣ ಸವಾಲು ಎದುರಿಸಲಿದೆ.