ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್| ಮುಶೀರ್ ಖಾನ್ ಚೊಚ್ಚಲ ದ್ವಿಶತಕ, ಸಂಕಷ್ಟದಿಂದ ಪಾರಾದ ಮುಂಬೈ
ಮುಶೀರ್ ಖಾನ್ | Photo: indiatoday.in
ಮುಂಬೈ: ಮುಶೀರ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತನ್ನ ಚೊಚ್ಚಲ ದ್ವಿಶತಕ (203 ರನ್, 357 ಎಸೆತ) ಗಳಿಸಿದ್ದು, ಈ ಮೂಲಕ ಬರೋಡಾ ವಿರುದ್ಧದ ರಣಜಿ ಟ್ರೋಫಿಯ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
ಬಿಕೆಸಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮುಶೀರ್ ತನ್ನ ದ್ವಿಶತಕದ ಹಾದಿಯಲ್ಲಿ 18 ಬೌಂಡರಿಗಳನ್ನು ಗಳಿಸಿದ್ದಾರೆ. ಹಾರ್ದಿಕ್ ಟಾಮೋರೆ (57 ರನ್, 248 ಎಸೆತ)ಅವರೊಂದಿಗೆ 6ನೇ ವಿಕೆಟ್ ಗೆ 181 ರನ್ ಜೊತೆಯಾಟ ನಡೆಸಿದ್ದಾರೆ. ಇದರೊಂದಿಗೆ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡ ತನ್ನ ಮೊದಲ ಇನಿಂಗ್ಸ್ ನಲ್ಲಿ 384 ರನ್ ಗಳಿಸಲು ನೆರವಾಗಿದ್ದಾರೆ. ಬರೋಡಾದ ಪರ ಭಾರ್ಗವ್ ಭಟ್(7-112) ಏಳು ವಿಕೆಟ್ ಗೊಂಚಲು ಪಡೆದಿದ್ದಾರೆ.
ಬ್ಯಾಟಿಂಗ್ ಆರಂಭಿಸಿರುವ ಬರೋಡಾ ಶನಿವಾರ 2ನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ. ಶಾಶ್ವತ್ ರಾವತ್(69 ರನ್) ಹಾಗೂ ವಿಷ್ಣು ಸೋಲಂಕಿ(23) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮುಂಬೈ ತಂಡ ಕೇವಲ 142 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಗಳನ್ನು ಕಳೆದುಕೊಂಡಿತು. ಕೇವಲ 4ನೇ ಪ್ರಥಮ ದರ್ಜೆ ಪಂದ್ಯವನ್ನಾಡುತ್ತಿರುವ 18ರ ಹರೆಯದ ಮುಶೀರ್ ಹೊಣೆಗಾರಿಕೆ ವಹಿಸಿಕೊಂಡು ತಂಡವನ್ನು ಆಧರಿಸಿದ್ದಾರೆ.
ಪೃಥ್ವಿ ಶಾ(33 ರನ್), ಭೂಪೆನ್ ಲಾಲ್ವಾನಿ(19 ರನ್) ಹಾಗೂ ನಾಯಕ ರಹಾ(3 ರನ್) ಬ್ಯಾಟಿಂಗ್ ನಲ್ಲಿ ವಿಫಲರಾದರು. ಅತ್ಯುತ್ತಮ ಇನಿಂಗ್ಸ್ ಆಡಿದ ಮುಶೀರ್ ತನ್ನ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಶಕ್ತರಾದರು.
ಯುವ ಆಟಗಾರ ಮುಶೀರ್ ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ನಡೆದಿದ್ದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ 60ರ ಸರಾಸರಿಯಲ್ಲಿ ಒಟ್ಟು 360 ರನ್ ಗಳಿಸಿ ಎರಡನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು.