×
Ad

ರಣಜಿ ಟ್ರೋಫಿ ಸೆಮಿ ಫೈನಲ್ ; ಯಶ್ ರಾಥೋಡ್ ಅರ್ಧಶತಕ, ವಿದರ್ಭಕ್ಕೆ ಮುನ್ನಡೆ

Update: 2025-02-19 21:19 IST

ಯಶ್ ರಾಥೋಡ್ | PTI 

ನಾಗ್ಪುರ: ಯಶ್ ರಾಥೋಡ್ ಹಾಗೂ ಅಕ್ಷಯ್ ವಾಡ್ಕರ್ ಅವರ ಮುರಿಯದ 91 ರನ್ ಜೊತೆಯಾಟದ ನೆರವಿನಿಂದ ಮಿನಿ ಕುಸಿತದಿಂದ ಚೇತರಿಸಿಕೊಂಡಿರುವ ವಿದರ್ಭ ತಂಡ ಚಾಂಪಿಯನ್ ಮುಂಬೈ ವಿರುದ್ಧ ರಣಜಿ ಟ್ರೋಫಿಯ ಸೆಮಿ ಫೈನಲ್‌ನಲ್ಲಿ 260 ರನ್ ಮುನ್ನಡೆಯಲ್ಲಿದೆ.

3ನೇ ದಿನದಾಟವಾದ ಬುಧವಾರ ಮುಂಬೈ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 270 ರನ್‌ ಗೆ ಆಲೌಟ್ ಮಾಡಿದ ವಿದರ್ಭ ತಂಡವು ಮೊದಲ ಇನಿಂಗ್ಸ್‌ನಲ್ಲಿ ನಿರ್ಣಾಯಕ 113 ರನ್ ಮುನ್ನಡೆ ಪಡೆಯಿತು.

ತನ್ನ 2ನೇ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡವು ಶಮ್ಸ್ ಮುಲಾನಿ(2-50) ಉತ್ತಮ ಸ್ಪೆಲ್‌ಗೆ ತತ್ತರಿಸಿ 56 ರನ್‌ ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭದಲ್ಲಿ ಸಂಕಷ್ಟಕ್ಕೀಡಾಯಿತು. ರಾಥೋಡ್(ಔಟಾಗದೆ 59)ಹಾಗೂ ವಾಡ್ಕರ್(ಔಟಾಗದೆ 31)ಇನಿಂಗ್ಸ್ ಅನ್ನು ಆಧರಿಸಿದರು. ಆತಿಥೇಯರು ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 147 ರನ್ ಗಳಿಸಿದೆ.

ಇನ್ನೂ ಎರಡು ದಿನದಾಟ ಬಾಕಿ ಉಳಿದಿದ್ದು, ಮುಂಬೈ ಸ್ಪಿನ್ನರ್‌ಗಳು ಸವಾಲಾಗಬಹುದು.

113 ರನ್ ಮುನ್ನಡೆ ಪಡೆದಿದ್ದ ವಿದರ್ಭ ತಂಡ ಉತ್ತಮ ಅರಂಭದ ವಿಶ್ವಾಸದಲ್ಲಿತ್ತು. ಆದರೆ ಮುಂಬೈ ಆಲ್‌ರೌಂಡರ್ ಶಾರ್ದೂಲ್ ಠಾಕೂರ್(1-14)ಎರಡನೇ ಓವರ್‌ನಲ್ಲಿ ಅಥರ್ವ ಟೈಡ್(0)ವಿಕೆಟನ್ನು ಕಬಳಿಸಿದರು. ದಾನಿಶ್ ಮಾಲೆವಾರ್ 29 ರನ್ ಗಳಿಸಿ ಮುಲಾನಿಗೆ ವಿಕೆಟ್ ಒಪ್ಪಿಸಿದರು. ಈ ಋತುವಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಕರುಣ್ ನಾಯರ್ ಕೇವಲ 6 ರನ್‌ ಗೆ ಔಟಾದರು. ಧ್ರುವ್ ಶೋರೆ(13 ರನ್) ಸ್ಪಿನ್ನರ್ ತನುಶ್ ಕೋಟ್ಯಾನ್‌ ಗೆ ವಿಕೆಟ್ ಒಪ್ಪಿಸಿದರು.

ಇದಕ್ಕೂ ಮೊದಲು 7 ವಿಕೆಟ್‌ಗಳ ನಷ್ಟಕ್ಕೆ 188 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಬೆಳೆಸಿದ ಮುಂಬೈ ತಂಡದ ಪರ ಆನಂದ್ 256 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 100 ರನ್ ಗಳಿಸಿದರು. ತನುಶ್ ಕೋಟ್ಯಾನ್(33ರನ್)ಅವರೊಂದಿಗೆ ನಿರ್ಣಾಯಕ 69 ರನ್ ಜೊತೆಯಾಟ ನಡೆಸಿ ಮುಂಬೈ ಸ್ಕೋರನ್ನು 250ರ ಗಡಿ ದಾಟಿಸಿದರು.

ಎಡಗೈ ಸ್ಪಿನ್ನರ್ ಪಾರ್ಥ ರೆಖಾಡೆ (4-55)ಈ ಜೊತೆಯಾಟವನ್ನು ಮುರಿದರು. ಆನಂದ್(106 ರನ್) 88ನೇ ಓವರ್‌ನಲ್ಲಿ ಔಟಾದರು.

►ಸಂಕ್ಷಿಪ್ತ ಸ್ಕೋರ್

ವಿದರ್ಭ ಮೊದಲ ಇನಿಂಗ್ಸ್ 383 ರನ್

ವಿದರ್ಭ 2ನೇ ಇನಿಂಗ್ಸ್: 147/4

ಮುಂಬೈ ಮೊದಲ ಇನಿಂಗ್ಸ್: 270 ರನ್‌ ಗೆ ಆಲೌಟ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News