×
Ad

ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್

Update: 2025-08-27 11:42 IST

ಆರ್.‌ ಅಶ್ವಿನ್‌ (Photo: PTI)

ಹೊಸದಿಲ್ಲಿ: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಭಾರತ ಕ್ರಿಕೆಟ್‌ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬುಧವಾರ ಐಪಿಎಲ್ ಕ್ರಿಕೆಟ್ ಮಾದರಿಗೂ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅವರು ತಮ್ಮ ಈ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

221 ಐಪಿಎಲ್ ಪಂದ್ಯಗಳಲ್ಲಾಡಿರುವ ಆರ್.ಅಶ್ವಿನ್, ಒಟ್ಟು 187 ವಿಕೆಟ್ ಗಳನ್ನು ಪಡೆದಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್.ಅಶ್ವಿನ್, “ಇಂದು ವಿಶೇಷ ದಿನವಾಗಿದ್ದು, ಹೀಗಾಗಿಯೇ ವಿಶೇಷ ಪ್ರಾರಂಭವೂ ಆಗಿದೆ. ಎಲ್ಲ ಅಂತ್ಯವೂ ಒಂದು ಪ್ರಾರಂಭವನ್ನು ಹೊಂದಿರುತ್ತದೆ ಎಂದು ಜನರು ಹೇಳುತ್ತಾರೆ. ಇಂದು ಐಪಿಎಲ್ ಕ್ರಿಕೆಟಿಗನಾಗಿ ನನ್ನ ಅಂತಿಮ ದಿನವಾಗಿದೆ. ಉತ್ತಮ ಸಂಬಂಧ, ಅದ್ಭುತ ನೆನಪುಗಳನ್ನು ನೀಡಿದ್ದಕ್ಕೆ ಎಲ್ಲಾ ಫ್ರಾಂಚೈಸಿಗಳಿಗೆ ಹಾಗೂ, ಇಲ್ಲಿಯವರೆಗೆ ಅವಕಾಶ ನೀಡಿದ್ದಕ್ಕೆ ಐಪಿಎಲ್ ಹಾಗೂ ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಐದು ಐಪಿಎಲ್ ತಂಡಗಳಲ್ಲಿ ಕಾಣಿಸಿಕೊಂಡಿದ್ದ ಆರ್.ಅಶ್ವಿ ನ್, ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ನಾಯಕರೂ ಆಗಿದ್ದರು. ನಂತರದ ದಿನಗಳಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ದಿಲ್ಲಿ ಕಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಟಗಾರರಾಗಿ ಕಾಣಿಸಿಕೊಂಡಿದ್ದರು.

ಐಪಿಎಲ್ ಮಾದರಿಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಐದನೆಯವರಾಗಿ ಆರ್.ಅಶ್ವಿನ್ ನಿವೃತ್ತರಾಗಿದ್ದಾರೆ. ಯಜುವೇಂದ್ರ ಚಾಹಲ್ ಪ್ರಥಮ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಭುವನೇಶ್ವರ್ ಕುಮಾರ್, ಸುನಿಲ್ ನರೈನ್ ಹಾಗೂ ಪಿಯೂಷ್ ಚಾವ್ಲಾ ಇದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಬ್ಯಾಟಿಂಗ್ ನಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದ ಆರ್.ಅಶ್ವಿನ್, ಒಂದು ಅರ್ಧಶತಕದೊಂದಿಗೆ ಒಟ್ಟು 833 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News