×
Ad

ಏರುತ್ತಿರುವ ನೀರಜ್, ಮನು ಭಾಕರ್, ವಿನೇಶ್ ಪೋಗಟ್ ಬ್ರಾಂಡ್ ಮೌಲ್ಯ

Update: 2024-08-22 21:35 IST

ನೀರಜ್, ಮನು ಭಾಕರ್, ವಿನೇಶ್ ಪೋಗಟ್ | PC : PTI 

ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಿಂಚಿದ ಅಥ್ಲೀಟ್‌ಗಳ ಬ್ರಾಂಡ್‌ ಮೌಲ್ಯದಲ್ಲಿ ಭಾರೀ ಏರಿಕೆಯಾಗಿದೆ. ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಶೂಟರ್ ಮನು ಭಾಕರ್ ಈಗ ತಲಾ ಎರಡು ಒಲಿಂಪಿಕ್ ಪದಕಗಳನ್ನು ಹೊಂದಿದ್ದಾರೆ. ಅವರಿಬ್ಬರ ಬ್ಯಾಂಡ್ ಮೌಲ್ಯಗಲ್ಲಿ ಈಗ ಭಾರೀ ಏರಿಕೆಯಾಗಿದೆ.

2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟರು. ಭಾರತದ ಶೂಟಿಂಗ್ ತಾರೆ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ನೀರಜ್ ಬ್ರಾಂಡ್ ಮೌಲ್ಯಮಾಪನದಲ್ಲಿ ಹಲವು ಕ್ರಿಕೆಟಿಗರಿಗಿಂತ ಮುಂದಿದ್ದಾರೆ. ಅದೇ ವೇಳೆ, ಮನು ಕೂಡ ದೊಡ್ಡ ಜಾಹೀರಾತುಗಳಿಗೆ ಸಹಿ ಹಾಕುತ್ತಿದ್ದಾರೆ.

ನೀರಜ್ ಚೋಪ್ರಾರ ಬ್ರಾಂಡ್ ಮೌಲ್ಯವು 29.6 ಮಿಲಿಯ ಡಾಲರ್ (ಸುಮಾರು 250 ಕೋಟಿ ರೂಪಾಯಿ)ನಿಂದ 40 ಮಿಲಿಯ ಡಾಲರ್ (ಸುಮಾರು 335 ಕೋಟಿ ರೂಪಾಯಿ)ಗೆ ಏರುವ ನಿರೀಕ್ಷೆಯಿದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಈ ಒಲಿಂಪಿಕ್ಸ್‌ಗೆ ಮೊದಲು ನೀರಜ್ ಚೋಪ್ರಾರ ಬ್ರಾಂಡ್ ಮೌಲ್ಯ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರಷ್ಟೇ ಇತ್ತು. ಈಗ ಚೋಪ್ರಾ, ಪಾಂಡ್ಯರನ್ನು ಹಿಂದಿಕ್ಕಲಿದ್ದಾರೆ.

ಭಾರತೀಯ ಕ್ರೀಡಾಳುಗಳ ಪೈಕಿ, ನೀರಜ್ ಚೋಪ್ರಾ ಅತಿ ಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ಕ್ರಿಕೆಟೇತರ ಕ್ರೀಡಾಪಟು ಆಗಿದ್ದಾರೆ.

ಮನು ಭಾಕರ್ ಇತ್ತೀಚೆಗೆ ಲಘು ಪಾನೀಯ ಕಂಪೆನಿ ತಮ್ಸ್‌ಅಪ್ ಜೊತೆಗೆ 1.5 ಕೋಟಿ ರೂ. ಮೌಲ್ಯದ ಜಾಹೀರಾತು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಪದಕ ಗೆಲ್ಲದಿದ್ದರೂ, ಪ್ಯಾರಿಸ್‌ನಲ್ಲಿ ಬಹುಷಃ ಅತ್ಯುತ್ತಮ ನಿರ್ವಹಣೆ ತೋರಿದವರು ಕುಸ್ತಿ ಪಟು ವಿನೇಶ್ ಫೋಗಟ್. ಅವರ ಬ್ರಾಂಡ್ ಮೌಲ್ಯವೂ ಏರುತ್ತಿದೆ. ಅವರ ಜಾಹೀರಾತು ಶುಲ್ಕವು ಈಗ ವರ್ಷಕ್ಕೆ 25 ಲಕ್ಷ ರೂ.ನಿಂದ ಒಂದು ಕೋಟಿ ರೂ.ಗೆ ಏರಿದೆ ಎಂದು ವರದಿಯೊಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News