ರಾಜಸ್ಥಾನ ರಾಯಲ್ಸ್‌ನ ದೀರ್ಘ ನಂಟು ಕಡಿದುಕೊಳ್ಳಲು ಮುಂದಾದ ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್ | PC : X
ಹೊಸದಿಲ್ಲಿ, ಆ.8: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 2025ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಿಶ್ರ ಫಲಿತಾಂಶ ಪಡೆದ ಕಾರಣ ರಾಜಸ್ಥಾನ ತಂಡದೊಂದಿಗಿನ ತನ್ನ ಸುದೀರ್ಘ ನಂಟನ್ನು ಕಡಿದುಕೊಳ್ಳಲು ಎದುರು ನೋಡುತ್ತಿದ್ದಾರೆ ಎಂದು ದಟ್ಟ ವದಂತಿ ಹಬ್ಬಿದೆ.
2013ರಿಂದ ರಾಜಸ್ಥಾನ ತಂಡದೊಂದಿಗೆ ನಂಟು ಹೊಂದಿರುವ ಸ್ಯಾಮ್ಸನ್ 2021ರಿಂದ ತಂಡದ ನಾಯಕತ್ವ ಹೊಂದಿದ್ದಾರೆ. ಕಳೆದ ದಶಕದಲ್ಲಿ ಫ್ರಾಂಚೈಸಿಯ ಪಯಣದಲ್ಲಿ ಸ್ಯಾಮ್ಸನ್ ಮುಖ್ಯ ಪಾತ್ರವಹಿಸಿದ್ದರು.
ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟರ್ ಗಳ ಪೈಕಿ ಒಬ್ಬರಾಗಿರುವ ಕೇರಳದ ಸ್ಯಾಮ್ಸನ್ ಟಿ-20 ಪಂದ್ಯಾವಳಿಯಲ್ಲಿ 4,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಮೂರು ಶತಕಗಳನ್ನು ಬಾರಿಸಿರುವ ಕೆಲವೇ ಆಟಗಾರರ ಪೈಕಿ ಒಬ್ಬರಾಗಿದ್ದಾರೆ.
2021ರಲ್ಲಿ ನಾಯಕನಾಗಿ ತನ್ನ ಮೊದಲ ಋತುವಿನಲ್ಲಿ ಪಂಜಾಬ್ ತಂಡದ ವಿರುದ್ಧ 63 ಎಸೆತಗಳಲ್ಲಿ 119 ರನ್ ಸಹಿತ ಒಟ್ಟು 484 ರನ್ ಗಳಿಸಿದ್ದರು. 2022ರಲ್ಲಿ 400ಕ್ಕೂ ಅಧಿಕ ರನ್ ಗಳಿಸುವ ಮೂಲಕ ರಾಜಸ್ಥಾನ ತಂಡವು 2ನೇ ಬಾರಿ ಐಪಿಎಲ್ ನಲ್ಲಿ ಫೈನಲ್ ತಲುಪಲು ನೆರವಾಗಿದ್ದರು.
2024ರ ಋತುವಿನಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಸ್ಯಾಮ್ಸನ್ 48.27ರ ಸರಾಸರಿಯಲ್ಲಿ 531 ರನ್ ಗಳಿಸಿದ್ದರು.
ಕೆಲವು ವರ್ಷಗಳಿಂದ ಐಪಿಎಲ್ ನಲ್ಲಿ ನೀಡುತ್ತಿರುವ ಉತ್ತಮ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾದ ಸೀಮಿತ ಓವರ್ ಕ್ರಿಕೆಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. 2015ರಲ್ಲಿ ಟಿ-20 ಕ್ರಿಕೆಟಿಗೆ ಕಾಲಿಟ್ಟಿದ್ದ ಸ್ಯಾಮ್ಸನ್ ಅವರು 2021ರಲ್ಲಿ ಏಕದಿನ ಕ್ರಿಕೆಟಿಗೆ ಕಾಲಿಟ್ಟಿದ್ದರು.
2024 ಸ್ಯಾಮ್ಸನ್ ಪಾಲಿಗೆ ಅದೃಷ್ಟದ ವರ್ಷವಾಗಿತ್ತು. ಐದು ಪಂದ್ಯಗಳಲ್ಲಿ 3 ಬಾರಿ ಟಿ-20 ಶತಕಗಳನ್ನು ಗಳಿಸಿದ್ದರು. ಬಾಂಗ್ಲಾದೇಶ ವಿರುದ್ಧ ಸ್ವದೇಶದಲ್ಲಿ 1 ಶತಕ ಗಳಿಸಿದ್ದ ಸ್ಯಾಮ್ಸನ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಇನ್ನೆರಡು ಶತಕಗಳನ್ನು ಗಳಿಸಿದ್ದರು.
ಯಾವೊಬ್ಬ ಬ್ಯಾಟರ್ ಕೂಡ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 3 ಶತಕ ಗಳಿಸಿಲ್ಲ.
ಸ್ಯಾಮ್ಸನ್ ಅವರು 2016 ಹಾಗೂ 2017 ಹೊರತುಪಡಿಸಿ ಬಹುತೇಕ ತನ್ನ ಇಡೀ ಐಪಿಎಲ್ ವೃತ್ತಿಜೀವನವನ್ನು ರಾಜಸ್ಥಾನ ತಂಡದಲ್ಲೇ ಕಳೆದಿದ್ದಾರೆ. 2016 ಹಾಗೂ 2017ರಲ್ಲಿ ರಾಜಸ್ಥಾನ ಫ್ರಾಂಚೈಸಿ ಅಮಾನತುಗೊಂಡಾಗ ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
2025ರ ಐಪಿಎಲ್ ಋತುವಿನಲ್ಲಿ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿಯುವ ಮೊದಲು 9 ಪಂದ್ಯಗಳಲ್ಲಿ ಆಡಿದ್ದು, 35.62ರ ಸರಾಸರಿಯಲ್ಲಿ 140ರ ಸ್ಟ್ರೈಕ್ ರೇಟ್ ನಲ್ಲಿ 285 ರನ್ ಗಳಿಸಿದ್ದಾರೆ. ಸ್ಯಾಮ್ಸನ್ ಹೆಬ್ಬೆರಳ ನೋವಿಗೆ ಒಳಗಾದ ಕಾರಣ ಮೊದಲ 3 ಪಂದ್ಯಗಳಲ್ಲಿ ಬ್ಯಾಟರ್ ಆಗಿ ಮಾತ್ರ ಆಡಿದ್ದರು. ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ಆಡಿದ್ದರು.
2013ರಲ್ಲಿ ರಾಜಸ್ಥಾನ ತಂಡದ ಪರ ಐಪಿಎಲ್ ನಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿದ್ದಾಗ ಸ್ಯಾಮ್ಸನ್ ಗೆ ಕೇವಲ 18ರ ವಯಸ್ಸು. 11 ವರ್ಷಗಳ ಕಾಲ ಈ ಫ್ರಾಂಚೈಸಿಯಲ್ಲಿ ಆಡಿದ್ದಾರೆ. ರಾಜಸ್ಥಾನದ ತಂಡದ ಪರ 149 ಪಂದ್ಯಗಳನ್ನು ಆಡಿದ್ದು, 144 ಇನಿಂಗ್ಸ್ಗಳಲ್ಲಿ 4,027 ರನ್ ಗಳಿಸಿ ಸಾರ್ವಕಾಲಿಕ ಶ್ರೇಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ತಂಡದ ಪರ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಆಟಗಾರನಾಗಿದ್ದಾರೆ. ಎರಡು ಶತಕ ಹಾಗೂ 25 ಅರ್ಧಶತಕಗಳ ಸಹಿತ 27 ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈಸೂಪರ್ ಕಿಂಗ್ಸ್ ತಂಡಗಳು ಸ್ಯಾಮ್ಸನ್ ಗೆ ಹೆಚ್ಚು ಸೂಕ್ತವಾಗುತ್ತವೆ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.
‘‘ಕೆಕೆಆರ್ನಲ್ಲಿ ಭಾರತೀಯ ವಿಕೆಟ್ ಕೀಪರ್-ಬ್ಯಾಟರ್ ಇಲ್ಲ. ಆ ತಂಡದಲ್ಲಿ ಉತ್ತಮ ನಾಯಕನ ಕೊರತೆ. ಅಜಿಂಕ್ಯ ರಹಾನೆ ನಾಯಕತ್ವ ಹಾಗೂ ರನ್ ಗಳಿಸುವ ಸಾಮರ್ಥ್ಯವನ್ನು ನಾನು ಅಲ್ಲಗಳೆಯಲಾರೆ. ರಹಾನೆ ಬ್ಯಾಟಿಂಗ್ ಮಿತಿ ಹಾಗೂ ಅವರ ವಯಸ್ಸನ್ನು ಪರಿಗಣಿಸಿದರೆ, ಸ್ಯಾಮ್ಸನ್ರನ್ನು ಸೇರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗುತ್ತದೆ’’ಎಂದು ತನ್ನ ಯೂ ಟ್ಯೂಬ್ ಚಾನೆಲ್ಗೆ ಚೋಪ್ರಾ ತಿಳಿಸಿದ್ದಾರೆ.
30ರ ಹರೆಯದ ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರುವ ಮೊದಲು 2012ರಲ್ಲಿ ಕೆಕೆಆರ್ ನಲ್ಲಿ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದರು.