ನನಗೆ ಹೊಸ ಜೀವನ ನೀಡಿದ CSKಗೆ ಧನ್ಯವಾದಗಳು: ಸರ್ಫರಾಝ್
Photo Credit : instagram.com
ಹೊಸದಿಲ್ಲಿ, ಡಿ.17: ಅಬುಧಾಬಿಯಲ್ಲಿ ಮಂಗಳವಾರ ನಡೆದ 2026ರ ಐಪಿಎಲ್ ನ ಮಿನಿ ಹರಾಜಿನ ವೇಳೆ ಮೂಲ ಬೆಲೆ 75 ಲಕ್ಷ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ಭಾರತೀಯ ಬ್ಯಾಟರ್ ಸರ್ಫರಾಝ್ ಖಾನ್, ‘‘ನನಗೆ ಹೊಸ ಜೀವನ ನೀಡಿದ ಸಿಎಸ್‌ಕೆಗೆ ತುಂಬಾ ಧನ್ಯವಾದಗಳು’ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
ಮಂಗಳವಾರ ರಾಜಸ್ಥಾನ ತಂಡದ ವಿರುದ್ಧ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 27ರ ವಯಸ್ಸಿನ ಸರ್ಫರಾಝ್ ಅವರು 22 ಎಸೆತಗಳಲ್ಲಿ 73 ರನ್ ಗಳಿಸಿದ ಬೆನ್ನಿಗೇ ಸಿಎಸ್‌ಕೆ ತಂಡಕ್ಕೆ ಆಯ್ಕೆಯಾದರು.
ಆರಂಭಿಕ ಸುತ್ತಿನ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಸರ್ಫರಾಝ್ ಕೊನೆಗೂ ಸಿಎಸ್‌ಕೆ ತೆಕ್ಕೆಗೆ ಸೇರಿದರು. ಸಾಮಾಜಿಕ ಮಾಧ್ಯಮದ ಮೂಲಕ ಫ್ರಾಂಚೈಸಿಗೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿದರು.
ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 64ರ ಸರಾಸರಿಯಲ್ಲಿ ಹಾಗೂ 182.85ರ ಸ್ಟ್ರೈಕ್‌ರೇಟ್‌ನಲ್ಲಿ ಆರು ಇನಿಂಗ್ಸ್‌ಗಳಲ್ಲಿ ಒಟ್ಟು 256 ರನ್ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಬ್ಯಾಟರ್ ಸರ್ಫರಾಝ್ ಕೊನೆಗೂ ಐಪಿಎಲ್‌ನಲ್ಲಿ ಮತ್ತೊಮ್ಮೆ ಆಡುವ ಅವಕಾಶ ಪಡೆದರು.
ಹರಾಜಿನುದ್ದಕ್ಕೂ ಸಕ್ರಿಯವಾಗಿದ್ದ ಸಿಎಸ್‌ಕೆ, ಹೊಸ ಆಟಗಾರರಾದ ಕಾರ್ತಿಕ್ ಶರ್ಮಾ ಹಾಗೂ ಪ್ರಶಾಂತ್ ವೀರ್ ಅವರನ್ನು ತಲಾ 14.20 ಕೋ.ರೂ.ಗೆ ಖರೀದಿಸಿತು. ಮ್ಯಾಟ್ ಹೆನ್ರಿ ಹಾಗೂ ರಾಹುಲ್ ಚಹಾರ್‌ರನ್ನು ಸೇರಿಸಿಕೊಳ್ಳುವ ಮೂಲಕ ತಂಡವನ್ನು ಬಲಿಷ್ಠಗೊಳಿಸಿದೆ.
ಹರಾಜಿಗಿಂತ ಮೊದಲು ಸಿಎಸ್‌ಕೆ ತಂಡವು ಸಂಜು ಸ್ಯಾಮ್ಸನ್‌ರನ್ನು 18 ಕೋ.ರೂ. ನೀಡಿ ಖರೀದಿಸಿತ್ತು. ದೀರ್ಘ ಸಮಯದಿಂದ ತಂಡದಲ್ಲಿದ್ದ ರವೀಂದ್ರ ಜಡೇಜ ಹಾಗೂ ಸ್ಯಾಮ್ ಕರನ್ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಸೇರಿದರು.
ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ, ಶ್ರೀಲಂಕಾದ ವೇಗದ ಬೌಲರ್ ಮಥೀಶ ಪಥಿರನ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಈ ನಿರ್ಧಾರದಿಂದ 13 ಕೋ.ರೂ. ಉಳಿಸಿಕೊಂಡಿತು.
ಸರ್ಫರಾಝ್ ಅವರು 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಬಾರಿ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು. ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಸರ್ಫರಾಝ್ ಅವರು ಈ ಬಾರಿ ಐಪಿಎಲ್ ಗೆ ಪ್ರವೇಶಿಸಿದ್ದಾರೆ.