×
Ad

ಟಿ20 ಕ್ರಿಕೆಟ್: ವೇಗದ ಶತಕ ಸಿಡಿಸಿದ ನಮೀಬಿಯಾದ ಜಾನ್ ನಿಕೊಲ್ ಲೋಫ್ಟಿ

Update: 2024-02-27 22:25 IST

ಜಾನ್ ನಿಕೊಲ್ ಲೋಫ್ಟಿ | Photo: X

ಹೊಸದಿಲ್ಲಿ: ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ವೇಗದ ಶತಕವನ್ನು ದಾಖಲಿಸಿದ ನಮೀಮಿಯಾದ ಜಾನ್ ನಿಕೊಲ್ ಲೋಫ್ಟಿ ಈಟನ್(101 ರನ್, 36 ಎಸೆತ, 11 ಬೌಂಡರಿ, 8 ಸಿಕ್ಸರ್) ಕ್ರಿಕೆಟ್ ಇತಿಹಾಸದಲ್ಲಿ ತನ್ನ ಹೆಸರು ಮೂಡಿಸಿದ್ದಾರೆ.

ನೇಪಾಳ ತ್ರಿ-ರಾಷ್ಟ್ರ ಟಿ-20 ಸರಣಿಯಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ನೇಪಾಳದ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಜಾನ್ ನಿಕೊಲ್ ಈ ಸಾಧನೆ ಮಾಡಿದ್ದಾರೆ.

ನಮೀಬಿಯಾ ತಂಡ 11ನೇ ಓವರ್ನಲ್ಲಿ 62 ರನ್ ಗೆ ಮೂರು ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಇಳಿದ ಜಾನ್ ನಿಕೊಲ್ ಆಕ್ರಮಣಕಾರಿ ಬ್ಯಾಟಿಂಗ್ ನ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಕೇವಲ 33 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ಗಳ ಸಹಾಯದಿಂದ ವೇಗದ ಶತಕವನ್ನು ಪೂರೈಸಿದ ಜಾನ್ ನಿಕೊಲ್ ನೇಪಾಳದ ಕುಶಾಲ್ ಮಲ್ಲಾ ಅವರ ದಾಖಲೆಯನ್ನು ಮುರಿದರು. ಕುಶಾಲ್ ಕಳೆದ ವರ್ಷ ಮಂಗೋಲಿಯದ ವಿರುದ್ಧ 34 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಜಾನ್ ನಿಕೊಲ್ ಸ್ಫೋಟಕ ಶೈಲಿಯ ಬ್ಯಾಟಿಂಗ್ ನೆರವಿನಿಂದ ನಮೀಬಿಯಾ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 206 ರನ್ ಗಳಿಸಿತು. ನೇಪಾಳ ತಂಡವು ಬ್ಯಾಟರ್ಗಳಾದ ರೋಹಿತ್ ಪೌದೆಲ್(42 ರನ್), ಕುಶಾಲ್ ಮಲ್ಲ(32 ರನ್), ದೀಪೆಂದ್ರ ಸಿಂಗ್(48 ರನ್) ಹಾಗೂ ಸೋಂಪಲ್ ಕಮಿ(26 ರನ್) ಅವರ ಪ್ರಯತ್ನದ ಹೊರತಾಗಿಯೂ 18.5 ಓವರ್ಗಳಲ್ಲಿ 186 ರನ್ ಗೆ ಆಲೌಟಾಗಿ 20 ರನ್ನಿಂದ ಸೋಲುಂಡಿದೆ.

ಜಾನ್ ನಿಕೊಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಬೌಲಿಂಗ್ ನಲ್ಲೂ ಗಮನಾರ್ಹ ಕೊಡುಗೆ ನೀಡಿದರು. ತನ್ನ ಸ್ಪಿನ್ ಬೌಲಿಂಗ್ ಮೂಲಕ 29 ರನ್ ಗೆ ಎರಡು ವಿಕೆಟ್ ಗಳನ್ನು ಪಡೆದರು. ತನ್ನ ಆಲ್ರೌಂಡ್ ಪ್ರದರ್ಶನಕ್ಕಾಗಿ ಪ್ರತಿಷ್ಠಿತ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News