×
Ad

Indonesia Open | ಸಿಂಧು, ಶ್ರೀಕಾಂತ್ ಶುಭಾರಂಭ

Update: 2026-01-21 21:50 IST

 ಪಿ.ವಿ. ಸಿಂಧು |  Photo Credit : PTI 

ಜಕಾರ್ತ, ಜ.21: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಬುಧವಾರ ಜಕಾರ್ತದಲ್ಲಿ ಆರಂಭವಾದ ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.

ಐದನೇ ಶ್ರೇಯಾಂಕದ ಸಿಂಧು ಬುಧವಾರ 53 ನಿಮಿಷಗಳಲ್ಲಿ ಮುಗಿದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಜಪಾನ್ ಆಟಗಾರ್ತಿ ಮನಾಮಿ ಸುಝು ಅವರನ್ನು 22-20, 21-18 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.

ಸದ್ಯ ವಿಶ್ವ ರ‍್ಯಾಂಕಿಂಗ್‌ನಲ್ಲಿ 33ನೇ ಸ್ಥಾನದಲ್ಲಿರುವ ಶ್ರೀಕಾಂತ್ ಒಂದು ಗಂಟೆ 12 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.22ನೇ ಆಟಗಾರ ಕೊಕೊ ವಟನಬೆ ಅವರನ್ನು 21-15, 21-23, 24-22 ಗೇಮ್‌ಗಳ ಅಂತರದಿಂದ ಮಣಿಸಿದರು.

ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ಚೈನೀಸ್ ತೈಪೆಯ ನಾಲ್ಕನೇ ಶ್ರೇಯಾಂಕದ ಆಟಗಾರ ಚೌ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಚೆನ್ ಅವರು ಮತ್ತೊಂದು ಆರಂಭಿಕ ಪಂದ್ಯದಲ್ಲಿ 21-14, 21-15 ಅಂತರದಿಂದ ಜಯಶಾಲಿಯಾದರು.

ಆದರೆ ಭಾರತದ ಇನ್ನೋರ್ವ ಆಟಗಾರ ಕಿರಣ್ ಜಾರ್ಜ್ ಇಂಡೋನೇಶ್ಯದ ಮುಹಮ್ಮದ್ ಝಾಕಿ ಉಬೈದಿಲ್ಲಾ ವಿರುದ್ಧ 17-21, 14-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಆರಂಭಿಕ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಕೂಡ ಆರಂಭಿಕ ಸುತ್ತಿನಲ್ಲಿ ಜುಲಿ ಡಾವಾಲ್ ಜೇಕಬ್ಸನ್ ವಿರುದ್ಧ 21-8, 20-22, 17-21 ಗೇಮ್‌ಗಳ ಅಂತರದಿಂದ ಸೋತು ನಿರ್ಗಮಿಸಿದ್ದಾರೆ.

ಮಿಕ್ಸೆಡ್ ಡಬಲ್ಸ್‌ನಲ್ಲೂ ಭಾರತದ ಅಭಿಯಾನ ಅಂತ್ಯವಾಗಿದೆ. ರೋಹನ್ ಕಪೂರ್–ಋತ್ವಿಕಾ ಹಾಗೂ ಧ್ರುವ ಕಪಿಲಾ–ತನಿಷ್ ಕ್ರಾಸ್ಟೊ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ಕಪೂರ್–ಋತ್ವಿಕಾ ಜೋಡಿ ಫ್ರಾನ್ಸ್‌ನ ಥೋಮ್ ಗಿಕ್ವೆಲ್ ಹಾಗೂ ಡೆಲ್ಫಿನ್ ಡೆಲ್ರು ವಿರುದ್ಧ 9-21, 20-22 ಗೇಮ್‌ಗಳ ಅಂತರದಿಂದ ಸೋತಿದೆ.

ಕಪಿಲಾ–ಕ್ರಾಸ್ಟೊಗೆ ಇನ್ನೋರ್ವ ಫ್ರೆಂಚ್ ಜೋಡಿ ಜುಲಿಯನ್ ಮೈಯೊ ಹಾಗೂ ಲಿಯಾ ಪಾಲೆರ್ಮೊ 23-21, 20-22, 21-6 ಗೇಮ್‌ಗಳ ಅಂತರದಿಂದ ಮಣಿಸಿ ನಿರ್ಗಮನದ ಹಾದಿ ತೋರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News