×
Ad

IND vs NZ T20 | 'ಸಿಕ್ಸರ್ ಅಭಿಷೇಕ್ ಶರ್ಮ' ಕಮಾಲ್; ನ್ಯೂಝಿಲ್ಯಾಂಡ್ ಗೆ 239 ರನ್ ಗಳ ಗುರಿ ನೀಡಿದ ಭಾರತ

Update: 2026-01-21 20:52 IST

Photo Credit : X

ನಾಗ್ಪುರ: ಇಲ್ಲಿನ ವಿದರ್ಭಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬುಧವಾರ ಭಾರತ ತಂಡವು 7 ವಿಕೆಟ್ ಗಳ ನಷ್ಟಕ್ಕೆ 238 ರನ್ ಗಳಿಸಿದೆ. ಪಂದ್ಯ ಗೆಲ್ಲಲು ನ್ಯೂಝಿಲ್ಯಾಂಡ್‌ ಗೆ 239 ರನ್ ಗಳ ಗುರಿ ನೀಡಿದೆ.

ಟಾಸ್ ಗೆದ್ದು ಭಾರತ ತಂಡವನ್ನು ನ್ಯೂಝಿಲ್ಯಾಂಡ್ ತಂಡವು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತ ತಂಡದ ಪರ ಸಂಜು ಸ್ಯಾಮ್‌ಸನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮ ಕೇವಲ 35 ಎಸೆತಗಳಲ್ಲಿ 84 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 8 ಸಿಕ್ಸರ್ ಗಳೇ ಸೇರಿದ್ದವು. 5 ಬೌಂಡರಿ ಸಹಿತ ಸ್ಫೋಟಕ ಆಟವಾಡಿದ ಅವರು 'ಸಿಕ್ಸರ್ ಸಿಧು' ಎಂದೇ ಹೆಸರಾಗಿದ್ದ ಮಾಜಿ ಕ್ರಿಕೆಟಿಗ ನವೋಜಿತ್ ಸಿಂಗ್ ಸಿಧು ಅವರನ್ನು ನೆನಪಿಸಿದರು.

ಕೊನೆಯ ಓವರ್‌ ನಲ್ಲಿ 21 ರನ್ ಕಲೆ ಹಾಕಿದ ರಿಂಕು ಸಿಂಗ್, ಭಾರತವು ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ನೆರವಾದರು. ಡ್ಯಾರಿಲ್ ಮಿಚೆಲ್ ಎಸೆದ ಕೊನೆಯ ಓವರ್‌ನಲ್ಲಿ ಅವರು ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿ ಚಚ್ಚಿದರು.

ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೂ, ಮೊದಲಿಗೆ ಅಭಿಷೇಕ್, ನಂತರ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಹಾಗೂ ಕೊನೆಯಲ್ಲಿ ರಿಂಕು ಸಿಂಗ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಕಿವೀಸ್ ನಾಯಕ ಸ್ಯಾಂಟ್ನರ್ ವೇಗ ಹಾಗೂ ಸ್ಪಿನ್ ಬೌಲಿಂಗ್ ಮೂಲಕ ಪಂದ್ಯದ ವೇಗಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾದರು.

ಅಭಿಷೇಕ್ ಜೊತೆ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ (10 ರನ್) ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಮೂರನೇ ಕ್ರಮಾಂಕದಲ್ಲಿ ಆಡಿದ ಇಶಾನ್ ಕಿಶನ್ ಕೇವಲ 8 ರನ್ ಗಳಿಸಿ ಔಟಾಗಿ ನಿರಾಸೆಗೊಳಿಸಿದರು. ಆ ವೇಳೆ ಭಾರತ 27 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು.

ಮೂರನೇ ವಿಕೆಟ್‌ಗೆ 47 ಎಸೆತಗಳಲ್ಲಿ 99 ರನ್‌ಗಳ ಜೊತೆಯಾಟ ನಡೆಸಿದ ಅಭಿಷೇಕ್ ಹಾಗೂ ನಾಯಕ ಸೂರ್ಯಕುಮಾರ್ ಇನಿಂಗ್ಸ್ ದುರಸ್ತಿಗೊಳಿಸಿದರು.

ಸೂರ್ಯಕುಮಾರ್ 22 ಎಸೆತಗಳಲ್ಲಿ 32 ರನ್ ಗಳಿಸಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 9 ರನ್‌ಗೆ ಔಟಾದಾಗ ಕ್ರೀಸಿಗಿಳಿದ ಹಾರ್ದಿಕ್ ಪಾಂಡ್ಯ (25 ರನ್, 16 ಎಸೆತ, 3 ಬೌಂಡರಿ, 1 ಸಿಕ್ಸರ್) ಅಭಿಷೇಕ್ ಜೊತೆ ನಾಲ್ಕನೇ ವಿಕೆಟ್‌ಗೆ 8 ಎಸೆತಗಳಲ್ಲಿ 23 ರನ್ ಸೇರಿಸಿದರು. ರಿಂಕು ಸಿಂಗ್ ಜೊತೆಗೆ ಆರನೇ ವಿಕೆಟ್‌ಗೆ 19 ರನ್‌ಗಳ ಜೊತೆಯಾಟವೂ ನಡೆಸಿದರು.

ಕೇವಲ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 50 ರನ್ ಪೂರೈಸಿದ ಅಭಿಷೇಕ್ ಅವರ ಅಬ್ಬರದ ಬ್ಯಾಟಿಂಗ್‌ಗೆ ಸ್ಪಿನ್ನರ್ ಇಶ್ ಸೋಧಿ 12ನೇ ಓವರ್‌ನಲ್ಲಿ ತೆರೆ ಎಳೆದರು.

ರಿಂಕು ಹಾಗೂ ಅರ್ಶದೀಪ್ ಎಂಟನೇ ವಿಕೆಟ್‌ಗೆ 29 ರನ್ ಸೇರಿಸಿ ತಂಡದ ಮೊತ್ತವನ್ನು 238ಕ್ಕೆ ತಲುಪಿಸಿದರು.

ಕಿವೀಸ್ ಬೌಲಿಂಗ್ ವಿಭಾಗದಲ್ಲಿ ಜೇಕಬ್ ಡಫಿ (2-27) ಹಾಗೂ ಕೈಲ್ ಜಮೀಸನ್ (2-54) ತಲಾ ಎರಡು ವಿಕೆಟ್ ಪಡೆದರು.

ಮೈಕಲ್ ಬ್ರೇಸ್‌ವೆಲ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಆಲ್‌ರೌಂಡರ್ ಕ್ರಿಸ್ಟಿಯನ್ ಕ್ಲಾರ್ಕ್ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆದರು. ಕಿವೀಸ್ ಪಡೆ ಮೂರು ಸ್ಪಿನ್ನರ್‌ಗಳು ಹಾಗೂ ಮೂವರು ವೇಗಿಗಳನ್ನು ಕಣಕ್ಕಿಳಿಸಿತು.

100ನೇ ಟಿ-20 ಪಂದ್ಯವನ್ನಾಡುತ್ತಿರುವ ಸೂರ್ಯಕುಮಾರ್, “ಮೊದಲು ಬ್ಯಾಟಿಂಗ್ ಅವಕಾಶ ಲಭಿಸಿದ್ದಕ್ಕೆ ಖುಷಿಯಾಗಿದೆ” ಎಂದು ಪ್ರತಿಕ್ರಿಯಿಸಿದರು.

ತಿಲಕ್ ವರ್ಮಾ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಭಾರತದ ಆಡುವ ಹನ್ನೊಂದರ ಬಳಗಕ್ಕೆ ವಾಪಸಾಗಿದ್ದಾರೆ. ಕಿಶನ್ 2023ರ ನವೆಂಬರ್‌ನಲ್ಲಿ ಕೊನೆಯ ಬಾರಿ ಟಿ-20 ಪಂದ್ಯವನ್ನಾಡಿದ್ದರು. ಮುಂಬರುವ ಟಿ-20 ವಿಶ್ವಕಪ್ ತಂಡದಲ್ಲಿ ಅವರು ಮೀಸಲು ವಿಕೆಟ್‌ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಭಾರತ ತಂಡವು ಕುಲದೀಪ್ ಯಾದವ್ ಹಾಗೂ ಹರ್ಷಿತ್ ರಾಣಾರನ್ನು ಕೈಬಿಟ್ಟು, ಎಂಟನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಬಲ ಹೆಚ್ಚಿಸುವ ತಂತ್ರಗಾರಿಕೆಗೆ ಮೊರೆಹೋಯಿತು. ಅಕ್ಷರ್ ಪಟೇಲ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು.

ಟಿ-20 ವಿಶ್ವಕಪ್ ಟೂರ್ನಿಗೆ ಮುನ್ನ ಉಭಯ ತಂಡಗಳಿಗೆ ಇದು ಕೊನೆಯ ಸರಣಿಯಾಗಿದೆ.

ನ್ಯೂಝಿಲ್ಯಾಂಡ್ ವಿರುದ್ಧ ಟಿ-20ಯಲ್ಲಿ ಗರಿಷ್ಠ ಮೊತ್ತ ಗಳಿಸಿದ ತಂಡಗಳು

245/5 – ಆಸ್ಟ್ರೇಲಿಯಾ, ಆಕ್ಲೆಂಡ್, 2018

241/3 – ಇಂಗ್ಲೆಂಡ್, ನೇಪಿಯರ್, 2019

238/7 – ಭಾರತ, ನಾಗಪುರ, 2026

236/4 – ಇಂಗ್ಲೆಂಡ್, ಕ್ರೈಸ್ಟ್‌ಚರ್ಚ್, 2025

234/4 – ಭಾರತ, ಅಹಮದಾಬಾದ್, 2023

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News