×
Ad

Australian Open | ಮೆಡ್ವೆಡೆವ್, ಅಲ್ಕರಾಝ್, ಸಬಲೆಂಕಾ, ಕೊಕೊ ಗೌಫ್ ಮೂರನೇ ಸುತ್ತಿಗೆ ಲಗ್ಗೆ

Update: 2026-01-21 21:46 IST

Photo Credit : PTI 

ಮೆಲ್ಬರ್ನ್, ಜ.21: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಸ್ಟಾರ್ ಆಟಗಾರರು ತಮ್ಮ ಪ್ರಾಬಲ್ಯ ಮುಂದುವರಿಸಿದ್ದು, ಡೇನಿಯಲ್ ಮೆಡ್ವೆಡೆವ್, ಕಾರ್ಲೊಸ್ ಅಲ್ಕರಾಝ್, ಆರ್ಯನಾ ಸಬಲೆಂಕಾ ಹಾಗೂ ಕೊಕೊ ಗೌಫ್ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೆಲ್ಬರ್ನ್ ಪಾರ್ಕ್‌ನಲ್ಲಿ 2021, 2022 ಹಾಗೂ 2024ರಲ್ಲಿ ಮೂರು ಬಾರಿ ಫೈನಲ್‌ಗೆ ತಲುಪಿದ್ದ ಮೆಡ್ವೆಡೆವ್ ಅವರು ಬುಧವಾರ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಕ್ವೆಂಟಿನ್ ಹ್ಯಾಲಿಸ್ ವಿರುದ್ಧ 6-7(9), 6-3, 6-4, 6-2 ಸೆಟ್‌ಗಳ ಅಂತರದಿಂದ ಜಯ ದಾಖಲಿಸಿದರು. ವಿಶ್ವದ ನಂ.11ನೇ ಆಟಗಾರರಾದ ಮೆಡ್ವೆಡೆವ್ ಆರಂಭಿಕ ಸೆಟ್ ಅನ್ನು ಟೈ-ಬ್ರೇಕರ್‌ನಲ್ಲಿ ಸೋತಿದ್ದರೂ, ಮುಂದಿನ ಮೂರು ಸೆಟ್‌ಗಳಲ್ಲಿ ಆರಂಭದಲ್ಲೇ ಹಿಡಿತ ಸಾಧಿಸಿದರು.

ಈ ಗೆಲುವಿನೊಂದಿಗೆ ಮೆಡ್ವೆಡೆವ್ 2026ರಲ್ಲಿ ಸತತ ಏಳು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 2024ರ ಯು.ಎಸ್. ಓಪನ್ ಟೂರ್ನಿಯ ನಂತರ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-32ರ ಸುತ್ತಿಗೆ ಪ್ರವೇಶಿಸಿದ್ದಾರೆ.

ನಾಲ್ಕು ಸೆಟ್‌ಗಳ ಪಂದ್ಯ ಆಡಿದ ಬಳಿಕ ಕ್ಯಾಮೆರಾದಲ್ಲಿ ‘ನಾಟ್ 5 ಸೆಟ್ಸ್’ ಎಂದು ಬರೆದು ಸಹಿ ಹಾಕಿದ ಮೆಡ್ವೆಡೆವ್, ಮುಂದಿನ ಸುತ್ತಿನಲ್ಲಿ ಹಂಗೇರಿಯ ಫ್ಯಾಬಿಯನ್ ಮರೋಝ್ಸಾನ್ ಅವರನ್ನು ಎದುರಿಸಲಿದ್ದಾರೆ.

ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ಜರ್ಮನಿಯ ಯಾನಿಕ್ ಹ್ಯಾನ್ಫ್‌ಮನ್ ವಿರುದ್ಧ ಆರಂಭದಲ್ಲಿ ಅಗ್ನಿಪರೀಕ್ಷೆಗೆ ಒಳಗಾದರೂ, ಅಂತಿಮವಾಗಿ 7-6(4), 6-3, 6-2 ಸೆಟ್‌ಗಳ ಅಂತರದಿಂದ ಜಯಶಾಲಿಯಾದರು.

ಮೊದಲ ಸೆಟ್ 79 ನಿಮಿಷಗಳ ಕಾಲ ನಡೆಯಿತು. ಲಯವನ್ನು ಕಂಡುಕೊಂಡ ನಂತರ ಅಲ್ಕರಾಝ್ ಪಂದ್ಯದುದ್ದಕ್ಕೂ ಆತ್ಮವಿಶ್ವಾಸದಿಂದ ಆಡಿದರು. ವೃತ್ತಿಜೀವನದಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲುವತ್ತ ಅವರು ಹೆಜ್ಜೆ ಇಟ್ಟಿದ್ದಾರೆ. ಆದರೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಈ ತನಕ ಅವರು ಕ್ವಾರ್ಟರ್ ಫೈನಲ್ ಸುತ್ತನ್ನು ದಾಟಿಲ್ಲ.

22 ವರ್ಷದ ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ವಿಶ್ವದ ನಂ.37ನೇ ಆಟಗಾರ ಕೊರೆಂಟಿನ್ ಮೌಟೆಟ್ ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಕ್ವಾಲಿಫೈಯರ್ ಬೈ ಕ್ಸುಕ್ಸುಯಾನ್ ಅವರನ್ನು 6-3, 6-1 ನೇರ ಸೆಟ್‌ಗಳ ಅಂತರದಿಂದ ಸದೆಬಡಿದ ಆರ್ಯನಾ ಸಬಲೆಂಕಾ ಸತತ ಆರನೇ ವರ್ಷ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಎರಡು ಬಾರಿಯ ಚಾಂಪಿಯನ್ ಸಬಲೆಂಕಾ ಆರಂಭದಲ್ಲೇ 5-0 ಮುನ್ನಡೆ ಪಡೆದರು. ಈ ಮೂಲಕ 2026ರ ಋತುವಿನಲ್ಲಿ ತಮ್ಮ ಅಜೇಯ ಓಟ ಮುಂದುವರಿಸಿದರು.

ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್ ಕೇವಲ 78 ನಿಮಿಷಗಳಲ್ಲಿ ಮುಗಿದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸರ್ಬಿಯಾದ ಓಲ್ಗಾ ಡ್ಯಾನಿಲೋವಿಚ್ ಅವರನ್ನು 6-2, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಪ್ರಾಬಲ್ಯ ಮೆರೆದರು.

2024ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಗೌಫ್, ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಹೈಲಿ ಬ್ಯಾಪ್ಟಿಸ್ಟ್ ಅವರನ್ನು ಎದುರಿಸಲಿದ್ದಾರೆ.

ಲಿಂಡಾ ಕ್ಲಿಮೊವಿಕೋವಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಎಲಿನಾ ಸ್ವಿಟೋಲಿನಾ ಈ ಋತುವಿನಲ್ಲಿ ಉತ್ತಮ ಆರಂಭ ಪಡೆದಿದ್ದು, ಮೂರನೇ ಸುತ್ತಿನಲ್ಲಿ ಡಯಾನ ಸ್ನೈದರ್ ಸವಾಲನ್ನು ಎದುರಿಸಲಿದ್ದಾರೆ.

ಜೈಮಿ ಫರಿಯಾರನ್ನು ನಾಲ್ಕು ಸೆಟ್‌ಗಳ ಅಂತರದಿಂದ ಸದೆಬಡಿದ ಆ್ಯಂಡ್ರೆ ರುಬ್ಲೇವ್ ಸತತ ಏಳನೇ ವರ್ಷ ಅಂತಿಮ-32ರ ಸುತ್ತಿಗೆ ಪ್ರವೇಶಿಸಿದ್ದಾರೆ.

*ಯೂಕಿ ಭಾಂಬ್ರಿ ಶುಭಾರಂಭ

ಪುರುಷರ ಡಬಲ್ಸ್ ವಿಭಾಗದಲ್ಲಿ ಬುಧವಾರ ಕೇವಲ 57 ನಿಮಿಷಗಳಲ್ಲಿ ಮುಗಿದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಯೂಕಿ ಭಾಂಬ್ರಿ ಅವರು ಸ್ವೀಡನ್‌ನ 10ನೇ ಶ್ರೇಯಾಂಕದ ಆಟಗಾರ ಆಂಡ್ರೆ ಗೊರಾನ್ಸನ್ ಜೊತೆಗೂಡಿ ಆಸ್ಟ್ರೇಲಿಯಾದ ಜೋಡಿ ಜೇಮ್ಸ್ ಡಕ್‌ವರ್ತ್ ಹಾಗೂ ಕ್ರೂಝ್ ಹೆವಿಟ್ ಅವರನ್ನು 6-3, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಪಂದ್ಯಾವಳಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿ ಶುಭಾರಂಭ ಮಾಡಿದರು.

ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಇಂಡೋ–ಸ್ವೀಡಿಷ್ ಜೋಡಿ 10ನೇ ಶ್ರೇಯಾಂಕ ಪಡೆದಿದೆ. ಮೊದಲ ಸುತ್ತಿನ ಪಂದ್ಯದುದ್ದಕ್ಕೂ ಬಿಗಿ ಹಿಡಿತ ಸಾಧಿಸಿದೆ.

ಮೊದಲ ಸೆಟ್‌ನಲ್ಲಿ ಐದು ಸರ್ವಿಸ್ ಗೇಮ್‌ಗಳಲ್ಲಿ ನಾಲ್ಕನ್ನು ಗೆದ್ದಿದ್ದು, 9ನೇ ಗೇಮ್‌ನಲ್ಲಿ ಒಮ್ಮೆ ಮಾತ್ರ ಅಂಕ ಬಿಟ್ಟುಕೊಟ್ಟರು.

ವಿಶ್ವದ ಮಾಜಿ ನಂ.1 ಆಟಗಾರ ಹಾಗೂ ಹಲವು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ವಿಜೇತರಾಗಿರುವ ಲೇಟನ್ ಹೆವಿಟ್ ಅವರ ಪುತ್ರ ಕ್ರೂಝ್ ಹೆವಿಟ್ ಹಾಗೂ ಜೇಮ್ಸ್ ವಿರುದ್ಧ ಭಾಂಬ್ರಿ ಜೋಡಿ ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದುಕೊಂಡಿತು.

ಎರಡನೇ ಸೆಟ್‌ನಲ್ಲೂ ಭಾಂಬ್ರಿ–ಗೊರಾನ್ಸನ್ ಜೋಡಿ ಒಂದೂ ಅಂಕವನ್ನು ಕೈಚೆಲ್ಲದೆ, ಮತ್ತೊಮ್ಮೆ ಐದು ಸರ್ವಿಸ್ ಗೇಮ್‌ಗಳಲ್ಲಿ ನಾಲ್ಕನ್ನು ಗೆದ್ದುಕೊಂಡರು.

ಭಾಂಬ್ರಿ–ಗೊರಾನ್ಸನ್ ಜೋಡಿ ಮುಂದಿನ ಸುತ್ತಿನಲ್ಲಿ ಮೆಕ್ಸಿಕೊದ ಸ್ಯಾಂಟಿಯಾಗೊ ಗೊಂಝಾಲೆಝ್ ಹಾಗೂ ನೆದರ್‌ಲ್ಯಾಂಡ್ಸ್‌ನ ಡೇವಿಡ್ ಪೀಲ್ ಅಥವಾ ಬ್ರೆಝಿಲ್‌ನ ಜೋಡಿ ಮಾರ್ಸೆಲೊ ಮೆಲೊ ಹಾಗೂ ಫೆರ್ನಾಂಡೊ ರಾಂಬೊಲಿ ಅವರನ್ನು ಎದುರಿಸಲಿದ್ದಾರೆ.

ಭಾಂಬ್ರಿ ಅವರು 2014ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಆಗ ಅವರು ನ್ಯೂಝಿಲ್ಯಾಂಡ್‌ನ ಮೈಕಲ್ ವೇನಸ್ ಜೊತೆಗೂಡಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದರು. ಕಳೆದ ವರ್ಷ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಭಾಂಬ್ರಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಯು.ಎಸ್. ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದರು.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಂಗಳವಾರ ಭಾರತದ ಟೆನಿಸ್ ಆಟಗಾರ ನಿಕಿ ಕಾಲಿಯಂಡಾ ಪೂಣಚ್ಚ ಅವರು ಥಾಯ್ಲೆಂಡ್‌ನ ಇಸಾರೊ ಅವರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದು, ಸ್ಪೇನ್‌ನ ಮಾರ್ಟಿನೆಝ್ ಹಾಗೂ ಮುನಾರ್ ವಿರುದ್ಧ 6-7(3), 5-7 ಸೆಟ್‌ಗಳ ಅಂತರದಿಂದ ಸೋತಿದ್ದರು.

ಯೂಕಿ ಭಾಂಬ್ರಿ ಮೆಲ್ಬರ್ನ್‌ನಲ್ಲಿ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ 2018ರ ವಿಂಬಲ್ಡನ್ ಚಾಂಪಿಯನ್ ಅಮೆರಿಕದ ನಿಕೋಲ್ ಮೆಲಿಚಾರ್–ಮಾರ್ಟಿನೆಝ್ ಅವರೊಂದಿಗೆ ಆಡಲಿದ್ದಾರೆ. ಮೊದಲ ಸುತ್ತಿನಲ್ಲಿ ಚೀನಾದ ಝಾಂಗ್ ಶುಐ ಹಾಗೂ ಜರ್ಮನಿಯ ಟಿಮ್ ಪುಟ್ಝ್ ಅವರನ್ನು ಎದುರಿಸಲಿದ್ದಾರೆ.

ಭಾಂಬ್ರಿ ಅವರು ಗ್ರ್ಯಾನ್‌ಸ್ಲಾಮ್ ಮಿಕ್ಸೆಡ್ ಡಬಲ್ಸ್‌ನಲ್ಲಿ ಎರಡನೇ ಬಾರಿ ಆಡುತ್ತಿದ್ದಾರೆ. 2025ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಆಡಿದ್ದರು.

114ನೇ ಆವೃತ್ತಿಯ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿ ಫೆಬ್ರವರಿ 1ರಂದು ಮುಕ್ತಾಯವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News