×
Ad

ಭಾರತದಲ್ಲಿ ಒಂದೇ ಟೆಸ್ಟ್‌ನಲ್ಲಿ ಅರ್ಧಶತಕ, ಆರು ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಜಾನ್ಸನ್

Update: 2025-11-24 20:20 IST

 ಮಾರ್ಕೊ ಜಾನ್ಸನ್ | PC : NDTV 

ಗುವಾಹಟಿ, ನ.24: ಭಾರತ ತಂಡದ ವಿರುದ್ಧ ಆಲ್‌ ರೌಂಡ್ ಪ್ರದರ್ಶನ ನೀಡಿದ ಮಾರ್ಕೊ ಜಾನ್ಸನ್ ದಕ್ಷಿಣ ಆಫ್ರಿಕಾ ಕ್ರಿಕೆಟಿನ ಟೆಸ್ಟ್ ದಾಖಲೆಯಲ್ಲಿ ತನ್ನ ಹೆಸರನ್ನು ಕೆತ್ತಿದರು.

25ರ ವಯಸ್ಸಿನ ಜಾನ್ಸನ್ ಭಾರತದ ಮಣ್ಣಿನಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ (93 ರನ್)ಹಾಗೂ ಆರು ವಿಕೆಟ್‌ ಗೊಂಚಲು(6-48) ಕಬಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು. ತನ್ನ ಸ್ಮರಣೀಯ ಪ್ರದರ್ಶನದ ಮೂಲಕದ ದಕ್ಷಿಣ ಆಫ್ರಿಕಾ ತಂಡವು ಮೂರನೇ ದಿನದಾಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಮಹತ್ತರ ಕೊಡುಗೆ ನೀಡಿದರು.

ಮೊದಲ ಇನಿಂಗ್ಸ್‌ ನಲ್ಲಿ 489 ರನ್ ಕಲೆ ಹಾಕಿರುವ ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ ಆತಿಥೇಯರಿಗೆ ಒತ್ತಡ ಹೇರಿದೆ. 2ನೇ ದಿನದಾಟವಾದ ರವಿವಾರ ಜಾನ್ಸನ್ ಅವರು 91 ಎಸೆತಗಳಲ್ಲಿ 93 ರನ್ ಗಳಿಸಿದ್ದರು. ಸೋಮವಾರ ಬೌಲಿಂಗ್‌ ನ ಮೂಲಕ ಮತ್ತೊಮ್ಮೆ ಮೇಲುಗೈ ಸಾಧಿಸಿದರು.

ಧ್ರುವ ಜುರೆಲ್ ವಿಕೆಟನ್ನು ಉರುಳಿಸುವ ಮೂಲಕ ಸೋಮವಾರ ಬೆಳಗ್ಗಿನ ಅವಧಿಯಲ್ಲಿ ಭಾರತದ ಕುಸಿತಕ್ಕೆ ನಾಂದಿ ಹಾಡಿದರು. ಮಧ್ಯಾಹ್ನದ ವೇಳೆಗೆ ರಿಷಭ್ ಪಂತ್, ನಿತೀಶ್ ರೆಡ್ಡಿ ಹಾಗೂ ರವೀಂದ್ರ ಜಡೇಜ ವಿಕೆಟ್‌ ಗಳನ್ನು ಕಬಳಿಸಿ ದಕ್ಷಿಣ ಆಫ್ರಿಕಾ ಬಿಗಿ ಹಿಡಿತ ಸಾಧಿಸುವಲ್ಲಿ ನೆರವಾದರು.

ಕುಲದೀಪ ಯಾದವ್(19 ರನ್)ವಿಕೆಟನ್ನು ಉರುಳಿಸಿದ ಜಾನ್ಸನ್ ಅವರು ಐದು ವಿಕೆಟ್ ಗೊಂಚಲು ಪೂರೈಸಿದರು. ಬುಮ್ರಾ(5ರನ್)ವಿಕೆಟನ್ನು ಉರುಳಿಸಿರುವ ಜಾನ್ಸನ್ 19.5 ಓವರ್‌ ಗಳಲ್ಲಿ 48 ರನ್‌ ಗೆ ಆರು ವಿಕೆಟ್‌ ಗಳನ್ನು ಪಡೆದರು.

ಜಾನ್ಸನ್ ಅವರು ಭಾರತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಗಳ ಪೈಕಿ ಒಬ್ಬರಾಗಿದ್ದಾರೆ. ಲ್ಯಾನ್ಸ್ ಕ್ಲೂಸ್ನರ್(1996ರಲ್ಲಿ 8/64)ಹಾಗೂ ಡೇಲ್ ಸ್ಟೇಯ್ನ್(2010ರಲ್ಲಿ 7/51)ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದರು.

ಭಾರತದಲ್ಲಿ ಆಡಿರುವ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡದ ಎಡಗೈ ವೇಗಿಗಳ ಪೈಕಿ ಜಾನ್ಸನ್ ನಾಲ್ಕನೇ ಶ್ರೇಷ್ಠ ಪ್ರದರ್ಶನ ನೀಡಿದರು.

ಭಾರತದಲ್ಲಿ ಈ ಶತಮಾನದಲ್ಲಿ 50 ಪ್ಲಸ್ ಸ್ಕೋರ್ ಹಾಗೂ ಐದು ವಿಕೆಟ್ ಗೊಂಚಲು ಪಡೆದ ಆಯ್ದ ಆಟಗಾರರ ಗುಂಪಿಗೆ ಜಾನ್ಸನ್ ಸೇರ್ಪಡೆಯಾದರು. ನಿಕಿ ಬೋಯೆ(2000ರಲ್ಲಿ ಬೆಂಗಳೂರಿನಲ್ಲಿ)ಹಾಗೂ ಜೇಸನ್ ಹೋಲ್ಡರ್(2008ರಲ್ಲಿ ಹೈದರಾಬಾದ್‌ನಲ್ಲಿ)ಜಾನ್ಸನ್‌ಗಿಂತ ಮೊದಲು ಡಬಲ್ ಸಾಧನೆ ಮಾಡಿದ್ದಾರೆ.

ಜಾನ್ಸನ್ 1988ರ ನಂತರ ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಕೇವಲ ಮೂರನೇ ಎಡಗೈ ವೇಗದ ಬೌಲರ್ ಆಗಿದ್ದಾರೆ. ಈ ಹಿಂದೆ ಝಹೀರ್ ಖಾನ್ ಹಾಗೂ ಮಿಚೆಲ್ ಜಾನ್ಸನ್ ಈ ಸಾಧನೆ ಮಾಡಿದ್ದರು.

ಭಾರತ ತಂಡವು 201 ರನ್‌ ಗೆ ಗಂಟುಮೂಟೆ ಕಟ್ಟಿದಾಗ ದಕ್ಷಿಣ ಆಫ್ರಿಕಾ ಬೃಹತ್ ಮುನ್ನಡೆ ಸಂಪಾದಿಸಿತು. ಫಾಲೋ ಆನ್ ಹೇರುವ ಅವಕಾಶವಿದ್ದರೂ ನಾಯಕ ಟೆಂಬಾ ಬವುಮಾ ಸಹ ಆಟಗಾರರು ಹಾಗೂ ಪ್ರಧಾನ ಕೋಚ್ ಜೊತೆ ಚರ್ಚಿಸಿದ ನಂತರ ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News