'ಪುರುಷರ ತಂಡ ಹೀಗೆ ಮಾಡಲಿಲ್ಲ’ : ಮಹಿಳಾ ತಂಡದ ನಡೆಗೆ ಅಶ್ವಿನ್ ಶ್ಲಾಘನೆ
Photo: hindustantimes
ಮುಂಬೈ,ನ.4: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಸಂಭ್ರಮದ ವೇಳೆ ತಂಡದ ಆಟಗಾರ್ತಿಯರು ಮಾಜಿ ಕ್ರಿಕೆಟಿಗರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಹಾಗೂ ಅಂಜುಮ್ ಚೋಪ್ರಾ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿ ಭಾವುಕ ಕ್ಷಣವನ್ನು ಸೃಷ್ಟಿಸಿದರು.
ಈ ನಡೆಗೆ ಭಾರತೀಯ ಕ್ರಿಕೆಟ್ ತಂಡದ ಸೀನಿಯರ್ ಬೌಲರ್ ಆರ್. ಅಶ್ವಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಭಾರತೀಯ ಮಹಿಳಾ ತಂಡವು ಮಿಥಾಲಿ ರಾಜ್ ಅವರಿಗೆ ಟ್ರೋಫಿ ನೀಡಿದ ಕ್ಷಣ ಅಪರೂಪದ್ದು. ಪುರುಷರ ತಂಡ ಎಂದಿಗೂ ಹೀಗೆ ಮಾಡಿಲ್ಲ. ಹಿಂದಿನ ಪೀಳಿಗೆಯ ಆಟಗಾರರಿಗೆ ನಿಜವಾದ ಗೌರವ ನೀಡುವುದನ್ನು ನಾವು ಅಪರೂಪಕ್ಕೆ ಮಾತ್ರ ನೋಡುತ್ತೇವೆ,” ಎಂದು ಅಶ್ವಿನ್ ಹೇಳಿದ್ದಾರೆ.
“ಮಹಿಳಾ ತಂಡವು ಅಂಜುಮ್ ಚೋಪ್ರಾ, ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಅವರಂತಹ ದಿಗ್ಗಜರಿಗೆ ಗೌರವ ಸಲ್ಲಿಸುವ ಮೂಲಕ ಅವರು ಬಿತ್ತಿದ ಶ್ರಮದ ಬೀಜಕ್ಕೆ ಇಂದು ಫಲ ನೀಡಿದೆ ಎಂಬುದನ್ನು ಸಾಬೀತುಪಡಿಸಿದೆ. ಇದು ಕೇವಲ ಗೆಲುವಿನ ಕ್ಷಣವಲ್ಲ, 25 ವರ್ಷಗಳ ಪ್ರಯತ್ನದ ಸಾಧನೆ,” ಎಂದು ಅವರು ಹೇಳಿದ್ದಾರೆ.