ಕ್ರಿಕೆಟ್: ಭಾರತ ಗೆಲುವಿಗೆ ಸುನಿಲ್ ಶೆಟ್ಟಿ ಸಂಭ್ರಮಾಚರಣೆಯ ವೀಡಿಯೊ ವೈರಲ್
PC | instagram.com/ahan.shetty/
ಲಂಡನ್: ಇಂಗ್ಲೆಂಡ್ ತಂಡದ ವಿರುದ್ಧ 5ನೇ ಹಾಗೂ ಅಂತಿಮ ಟೆಸ್ಟ್ನ ಅಂತಿಮ ದಿನ ಭಾರತ ತಂಡ ಆರು ರನ್ಗಳಿಂದ ಎದುರಾಳಿಯನ್ನು ರೋಚಕವಾಗಿ ಸೋಲಿಸಿರುವುದು ವಿಶ್ವಾದ್ಯಂತ ಕ್ರಿಕೆಟ್ ಜ್ವರ ವ್ಯಾಪಿಸಲು ಕಾರಣವಾಯಿತು. ಆದರೆ ಆನ್ಲೈನ್ನಲ್ಲಿ ಎಲ್ಲರ ಹೃದಯ ಗೆದ್ದದ್ದು ಭಾರತೀಯ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಅವರ ಮಾವ ಸುನೀಲ್ ಶೆಟ್ಟಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಹುಚ್ಚೆದ್ದು ಕುಣಿದ ವೀಡಿಯೊ.
ಬಾಲಿವುಡ್ ತಾರೆ ಹೆಮ್ಮೆಯಿಂದ ಮತ್ತು ಸಂಭ್ರಮದಿಂದ ಭಾರತದ ತ್ರಿವರ್ಣಧ್ವಜವನ್ನು ಬೀಸುತ್ತಿರುವ ಕ್ಷಣವನ್ನು ಅವರ ಪುತ್ರ ಅಹಾನ್ ಶೆಟ್ಟಿ ಸೆರೆಹಿಡಿದಿದ್ದು, ಇದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತ ಗೆಲುವು ದಾಖಲಿಸುತ್ತಿದ್ದಂತೆ ಸುನೀಲ್ ಶೆಟ್ಟಿ ದೊಡ್ಡದಾಗಿ ನಕ್ಕು ಸಂಭ್ರಮಿಸಿದರು.
ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ 2-2 ಅಂತರದಲ್ಲಿ ಸರಣಿ ಸಮಗೊಳಿಸಿದ ಈ ಕ್ಷಣ, ಇತ್ತೀಚಿನ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಎನಿಸಿದೆ. 374 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು ವೇಗದ ಬೌಲರ್ ಮೊಹ್ಮದ್ ಸಿರಾಜ್ ಹಳಿ ತಪ್ಪಿಸಿದರು. ಗೆಲುವಿಗೆ ಏಳು ರನ್ ಬೇಕಿದ್ದಾಗ ಇಂಗ್ಲೆಂಡ್ ತಂಡ ಆಲೌಟ್ ಆಯಿತು. ತೀವ್ರ ಜಿದ್ದಿನ ಪಂದ್ಯದ ನಡುವೆಯೂ ಶೆಟ್ಟಿ ಕುಟುಂಬದ ಸಂಭ್ರಮ ಎಲ್ಲರ ಗಮನ ಸೆಳೆಯಿತು.
"ಓವಲ್ನಲ್ಲಿ ಎರಡು ನಂಬಸಲಾಧ್ಯ ದಿನಗಳು! ಎಂಥ ಪಂದ್ಯ ಹಾಗೂ ಎಂಥ ಗೆಲುವು! ಕಮಾನ್ ಇಂಡಿಯಾ, ಆಲ್ವೇಸ್ ಮೈ ಇಂಡಿಯಾ" ಎಂಬ ಶೀರ್ಷಿಕೆಯೊಂದಿಗೆ ಅಹಾನ್ ಶೆಟ್ಟಿ ಸ್ಟೇಡಿಯಂ ಸಂಭ್ರಮಾಚರಣೆಯ ಫೋಟೊ ಮತ್ತು ವೀಡಿಯೊ ಷೇರ್ ಮಾಡಿದ್ದಾರೆ.
ರಾಹುಲ್ ಪತ್ನಿ ಅತಿಯಾ ಶೆಟ್ಟಿ ಕೂಡಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ "ಅವಾಸ್ತವ!" ಎಂಬ ಶೀರ್ಷಿಕೆಯೊಂದಿಗೆ ರೋಮಾಂಚಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಕರೀನಾ ಕಪೂರ್ ಸೇರಿದಂತೆ ಹಲವು ಮಂದಿ ಬಾಲಿವುಡ್ ತಾರೆಯರು ಸಂಭ್ರಮದಲ್ಲಿ ಸೇರಿಕೊಂಡಿದ್ದಾರೆ. ಆದಾಗ್ಯೂ ಬಾಲಿವುಡ್ ತಾರೆ ಪ್ರೇಕ್ಷಕರ ಗ್ಯಾಲರಿಯಲ್ಲೇ ಸಂಭ್ರಮಿಸಿರುವುದು ದೇಶದ ಬಗೆಗಿನ ಹೆಮ್ಮೆ, ಪ್ರೀತಿ ಮತ್ತು ರಾಷ್ಟ್ರಪ್ರೇಮದ ಸಂಕೇತ ಎನಿಸಿದೆ.