×
Ad

ಪಂದ್ಯ ಗೆದ್ದ ಬಳಿಕ ಭಾರತ ಪಾಕ್ ಧ್ವಜಗಳನ್ನು ಪ್ರದರ್ಶಿಸಿ ಜನಮನ ಗೆದ್ದ ಪಾಕಿಸ್ತಾನದ ಶಹಝೈಬ್

Update: 2024-04-21 17:57 IST

PC : NDTV 

ದುಬೈ : ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟ ಬಳಿಕ ಕ್ರೀಡಾ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ಪರ್ಧೆ ಏರ್ಪಡುವುದು ಅಪರೂಪ. ಆದರೆ ಎರಡು ರಾಷ್ಟ್ರಗಳ ಕ್ರೀಡಾಪಟುಗಳು ಪರಸ್ಪರ ಎದುರಾದಾಗ, ತೀವ್ರ ಪೈಪೋಟಿ ಉಂಟಾಗುತ್ತದೆ. ಶನಿವಾರ ದುಬೈನಲ್ಲಿ ನಡೆದ ಕರಾಟೆ ಕಾಂಬ್ಯಾಕ್ಟ್‌ ನಲ್ಲಿ ಭಾರತದ ರಾಣಾ ಸಿಂಗ್ ಮತ್ತು ಪಾಕಿಸ್ತಾನದ ಶಹಝೈಬ್ ರಿಂಧ್ ಪರಸ್ಪರ ಎದುರಾದಾಗ ಅದೇ ಸನ್ನಿವೇಶ ಉಂಟಾಗಿತ್ತು. ತೀವ್ರ ಹೋರಾಟದಲ್ಲಿ ಪಾಕಿಸ್ತಾನದ ಶಹಝೈಬ್ 2-1 ಅಂತರದಲ್ಲಿ ಜಯಭೇರಿ ಬಾರಿಸಿದರು. ಮೊದಲ ಮತ್ತು ಎರಡನೇ ಪಂದ್ಯವನ್ನು ಕ್ರಮವಾಗಿ ಪಾಕಿಸ್ತಾನದ ರಿಝ್ವಾನ್ ಅಲಿ ಮತ್ತು ಭಾರತದ ಹಿಮಾಂಶು ಕೌಶಿಕ್ ಗೆದ್ದ ನಂತರ ಸ್ಪರ್ಧೆಯು ಮೂರನೇ ಸುತ್ತಿಗೆ ಹೋಯಿತು.

ಆಟಕ್ಕಿಂತ ಹೆಚ್ಚಾಗಿ, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿದ್ದು ಶಹಝೈಬ್ ಅವರ ತೋರಿದ ಕ್ರೀಡಾ ಸ್ಪೂರ್ತಿ. ಪಾಕಿಸ್ತಾನದ ಅಥ್ಲೀಟ್ ತನ್ನ ದೇಶ ಮತ್ತು ಭಾರತದ, ಎರಡೂ ರಾಷ್ಟ್ರಗಳ ಧ್ವಜಗಳನ್ನು ಹಿಡಿದು ಎಲ್ಲರ ಗಮನ ಸೆಳೆದರು.

ಪಂದ್ಯದ ನಿರೂಪಕ ಈ ಅಚ್ಚರಿಯನ್ನು ಕಂಡು ಶಹಝೈಬ್ ಅವರನ್ನು ಮಾತಿಗೆಳೆದರು.

ಈ ಕುರಿತು ಮಾತನಾಡುತ್ತಾ ಶೆಹಝೈಬ್, "ಈ ಹೋರಾಟ ಶಾಂತಿಗಾಗಿ. ನಾವು ಶತ್ರುಗಳಲ್ಲ, ನಾವು ಜೊತೆಯಾಗಿಯೇ ಇದ್ದೇವೆ. ಜೊತೆಯಾಗೇ ನಾವು ಏನು ಬೇಕಾದರೂ ಮಾಡಬಹುದು. ಈ ಹೋರಾಟವು ಪಾಕಿಸ್ತಾನ ಮತ್ತು ಭಾರತದ ಸ್ನೇಹಕ್ಕಾಗಿ. ಎರಡು ದೇಶಗಳ ನಡುವಿನ ಸಂಬಂಧ ಹತ್ತಿರವಾಗಿಸಲು ಇದೊಂದು ಪ್ರಯತ್ನವಷ್ಟೇ” ಎಂದರು.

"ಇಲ್ಲಿಗೆ ಬಂದಿದ್ದಕ್ಕಾಗಿ ನಾನು ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಸೂಪರ್ ಸ್ಟಾರ್. ನಾನು ಬಾಲ್ಯದಿಂದಲೂ ನಿಮ್ಮ ಚಲನಚಿತ್ರಗಳನ್ನು ನೋಡುತ್ತಿದ್ದೇನೆ. ನಿಮ್ಮ ಮುಂದೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಂತೋಷವಾಗಿದೆ", ಎಂದು ಶಹಝೈಬ್ ಹೇಳಿದರು.

ಪಂದ್ಯದ ನಂತರ, ಶಹಝೈಬ್ ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಮಾತುಕತೆ ನಡೆಸುವ ಅವಕಾಶ ಸಿಕ್ಕಿತು. ಶಹಝೈಬ್ ತೋರಿದ ಗಡಿಮೀರಿದ ಪ್ರೀತಿಗೆ ಸಲ್ಮಾನ್ ಖಾನ್ ಶ್ಲಾಘಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News