×
Ad

ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ | ರೈಬಾಕಿನಾಗೆ ಸೋಲುಣಿಸಿ ಫೈನಲ್ ತಲುಪಿದ ಕ್ರೆಜ್ಸಿಕೋವಾ

Update: 2024-07-12 21:11 IST

ಕ್ರೆಜ್ಸಿಕೋವಾ | PC : X

ಲಂಡನ್ : ಆರಂಭಿಕ ಸೆಟ್ ಸೋಲಿನಿಂದ ಚೇತರಿಸಿಕೊಂಡ ಝೆಕ್ ಗಣರಾಜ್ಯದ ಆಟಗಾರ್ತಿ ಬಾರ್ಬರಾ ಕ್ರೆಜ್ಸಿಕೋವಾ ಗುರುವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ 2ನೇ ಸೆಮಿ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಎಲಿನಾ ರೈಬಾಕಿನಾರನ್ನು 3-6, 6-3, 6-4 ಸೆಟ್ಗಳ ಅಂತರದಿಂದ ಸದೆ ಬಡಿದರು. ಈ ಮೂಲಕ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್‌ಗೆ ಪ್ರವೇಶಿಸಿದರು.

31ನೇ ಶ್ರೇಯಾಂಕದ ಕ್ರೆಜ್ಸಿಕೋವಾ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಟಲಿಯ ಏಳನೇ ಶ್ರೇಯಾಂಕದ ಜಾಸ್ಮಿನ್ ಪಯೋಲಿನಿ ಅವರನ್ನು ಎದುರಿಸಲಿದ್ದಾರೆ.

2021ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಕ್ರೆಜ್ಸಿಕೋವಾ ವಿಂಬಲ್ಡನ್‌ನಲ್ಲಿ ಈ ತನಕ ನಾಲ್ಕನೇ ಸುತ್ತು ದಾಟಿರಲಿಲ್ಲ. ಈ ವರ್ಷ ಗಾಯ ಹಾಗೂ ಆರೋಗ್ಯದ ಸಮಸ್ಯೆಯನ್ನು ಎದುರಿಸಿದ್ದ ಕ್ರೆಜ್ಸಿಕೋವಾ ಪ್ರಸಕ್ತ ಟೂರ್ನಿಯಲ್ಲಿ ಫೈನಲ್‌ಗೆ ತಲುಪುತ್ತಾರೆಂದು ಯಾರೂ ಊಹಿಸಿರಲಿಲ್ಲ. ಎಲ್ಲರ ಊಹೆಯನ್ನು ಮೀರಿ ನಿಂತ ಕ್ರೆಜ್ಸಿಕೋವಾ ವೃತ್ತಿಜೀವನದಲ್ಲಿ ಎರಡನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.

ರೈಬಾಕಿನಾ ಮೊದಲ ಸೆಟ್ಟನ್ನು 6-3 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದರು. ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಕ್ರೆಜ್ಸಿಕೋವಾ ಸ್ಕೋರನ್ನು ಸಮಬಲಗೊಳಿಸಿದರು. 3ನೇ ಸೆಟ್‌ನಲ್ಲಿ ಹಿಡಿತ ಸಾಧಿಸಿದ ಕ್ಸೆಜ್ಸಿಕೋವಾ 6-4 ಅಂತರದಿಂದ ಜಯ ಸಾಧಿಸಿದರು.

ಇಂದು ನನ್ನ ಆಟ ಹಾಗೂ ಹೋರಾಟಕಾರಿ ಪ್ರವೃತ್ತಿಯು ಹೆಮ್ಮೆ ತಂದಿದೆ. ನಾನು ಪ್ರತಿ ಚೆಂಡಿಗಾಗಿ ಹೋರಾಡಲು ಯತ್ನಿಸಿದ್ದೆ. ಎರಡನೇ ಸೆಟ್‌ನಲ್ಲಿ ನನ್ನ ಲಯ ಕಂಡುಕೊಂಡೆ. ಫೈನಲ್ ಪಂದ್ಯದಲ್ಲಿ ದೊಡ್ಡ ಹೋರಾಟ ನಿರೀಕ್ಷಿಸುತ್ತಿದ್ದೇನೆ. ಜಾಸ್ಮಿನ್ ಪಯೋಲಿನಿ ಪ್ರಬಲ ಹೋರಾಟಗಾರ್ತಿ ಎಂದು ಗೊತ್ತಿದೆ ಎಂದು ಕ್ರೆಜ್ಸಿಕೋವಾ ಹೇಳಿದ್ದಾರೆ.

ಶುಕ್ರವಾರ ಸೆಂಟರ್‌ಕೋರ್ಟ್‌ನಲ್ಲಿ ನಡೆದ ಮ್ಯಾರಥಾನ್ ಸೆಮಿ ಫೈನಲ್‌ನಲ್ಲಿ ಫ್ರೆಂಚ್ ಓಪನ್ ಫೈನಲಿಸ್ಟ್ ಪಯೋಲಿನಿ ಅವರು ಡೊನ್ನಾ ವೆಕಿಕ್‌ರನ್ನು ಹಿಮ್ಮೆಟ್ಟಿಸಿ ಫೈನಲ್‌ಗೆ ತಲುಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News