ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ಗೆ ತೆರೆ : 22 ಪದಕಗಳನ್ನು ಗೆದ್ದುಕೊಂಡ ಭಾರತ
Photo Credit : X
ಹೊಸದಿಲ್ಲಿ, ಅ. 5: ಹೊಸದಿಲ್ಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ ರವಿವಾರ ಮುಕ್ತಾಯಗೊಂಡಿದ್ದು, ಭಾರತವು ಆರು ಚಿನ್ನ, ಒಂಭತ್ತು ಬೆಳ್ಳಿ ಮತ್ತು ಏಳು ಕಂಚುಗಳೊಂದಿಗೆ ಒಟ್ಟು 22 ಪದಕಗಳನ್ನು ಗೆದ್ದಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.
ಪಂದ್ಯಾವಳಿಯ ಅಂತಿಮ ದಿನವಾದ ರವಿವಾರ ಏಳು ಭಾರತೀಯರು ಸ್ಪರ್ಧೆಯಲ್ಲಿದ್ದರು. ಸಿಮ್ರಾನ್ ಶರ್ಮಾ 200 ಮೀಟರ್ ಟಿ12 ಓಟದಲ್ಲಿ ಬೆಳ್ಳಿ ಗೆದ್ದರೆ, ಪ್ರೀತಿ ಪಾಲ್ 100 ಮೀಟರ್ ಟಿ35 ಓಟದಲ್ಲಿ ಬೆಳ್ಳಿ ಪಡೆದರು. ಇದು ಹಾಲಿ ಕ್ರೀಡಾಕೂಟದಲ್ಲಿ ಇವರಿಬ್ಬರ ಎರಡನೇ ಪದಕವಾಗಿದೆ.
ಪ್ಯಾರಾಲಿಂಪಿಕ್ಸ್ ಚಾಂಪಿಯನ್ ನವದೀಪ್ ಜಾವೆಲಿನ್ ಥ್ರೋ ಎಫ್41 ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ಸಂದೀಪ್ 200 ಮೀಟರ್ ಓಟದ ಟಿ44 ವಿಭಾಗದಲ್ಲಿ ಕಂಚು ಪಡೆದರು.
ಪದಕ ಪಟ್ಟಿಯಲ್ಲಿ ಬ್ರೆಝಿಲ್‌ಗೆ ಅಗ್ರ ಸ್ಥಾನ
ಸ್ಪರ್ಧಾವಳಿಯಲ್ಲಿ 15 ಚಿನ್ನ, 20 ಬೆಳ್ಳಿ ಹಾಗೂ 9 ಕಂಚು ಸಹಿತ ಒಟ್ಟು 44 ಪದಕಗಳನ್ನು ಗೆದ್ದಿರುವ ಬ್ರೆಝಿಲ್ ತಂಡವು ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. 2024ರಲ್ಲಿ ಅಗ್ರ ಸ್ಥಾನ ಪಡೆದಿದ್ದ ಚೀನಾ ತಂಡವನ್ನು ಹಿಂದಿಕ್ಕಿತು.
ಚೀನಾ ಈ ಬಾರಿ ಒಟ್ಟು 52 ಪದಕಗಳನ್ನು(13 ಚಿನ್ನ, 22 ಬೆಳ್ಳಿ ಹಾಗೂ 17 ಕಂಚು)ಗಳಿಸಿದರೂ ಕಡಿಮೆ ಚಿನ್ನ ಗೆದ್ದ ಕಾರಣ 2ನೇ ಸ್ಥಾನ ಪಡೆದಿದೆ. ಇರಾನ್(16 ಪದಕಗಳು, 9 ಚಿನ್ನ, 2 ಬೆಳ್ಳಿ, 5 ಕಂಚು)ಮೂರನೇ ಸ್ಥಾನ ಪಡೆದಿದೆ.
ಇದೇ ವೇಳೆ ಆತಿಥೇಯ ಭಾರತ ತಂಡವು ಒಟ್ಟು 22 ಪದಕಗಳನ್ನು ಜಯಿಸಿ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.