ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ : 2ನೇ ಬಾರಿ ಪದಕ ಜಯಿಸಿ ಇತಿಹಾಸ ನಿರ್ಮಿಸಿದ ಅಂತಿಮ್ ಪಂಘಾಲ್
ಅಂತಿಮ್ ಪಂಘಾಲ್ | PC : PTI
ಹೊಸದಿಲ್ಲಿ, ಸೆ.19: ಕ್ರೊಯೇಶಿಯದ ಝಾಗ್ರೆಬ್‌ನಲ್ಲಿ ಗುರುವಾರ ನಡೆದ 2025ರ ಆವೃತ್ತಿಯ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ಭಾರತದ ಕುಸ್ತಿಪಟು ಅಂತಿಮ್ ಪಂಘಾಲ್ ಇತಿಹಾಸ ನಿರ್ಮಿಸಿದರು.
ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಂತಿಮ್ ಅವರು ಸ್ವೀಡನ್‌ನ ಜೊನ್ನಾ ಎಮ್ಮಾ ಮಲ್ಮಾಗ್ರೆನ್‌ರನ್ನು 9-1 ಅಂತರದಿಂದ ಮಣಿಸಿದರು.
2023ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಅಂತಿಮ್ ಇದೀಗ ಎರಡನೇ ಬಾರಿ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. ಭಾರತೀಯ ಕುಸ್ತಿಪಟುಗಳಿರುವ ಅಪರೂಪದ ಗುಂಪಿಗೆ ಸೇರಿದ್ದಾರೆ.
ಅಂತಿಮ್ ಪಂಘಾಲ್ ಅವರು ವಿನೇಶ್ ಫೋಗಟ್ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದಿರುವ ಕುಸ್ತಿಪಟು ಎನಿಸಿಕೊಂಡಿದ್ದಾರೆ.
‘‘ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ನಾನು ಹಾಗೂ ವಿನೇಶ್ ಗೆದ್ದಿದ್ದೇವೆ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ನಾನು ಕಳೆದ ಬಾರಿ ಪದಕ ಗೆದ್ದಾಗ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅದು ನನ್ನ ಮೊದಲ ಹಿರಿಯರ ಮಟ್ಟದ ಸ್ಪರ್ಧಾವಳಿಯಾಗಿತ್ತು. ಈ ಬಾರಿ ನಾನು ಚಿನ್ನದ ಪದಕ ಗೆಲ್ಲಲು ಯೋಚಿಸಿದ್ದೆ. ಚಾಂಪಿಯನ್ ಆಗಿರುವ ಜಪಾನಿನ ಹರುನಾ ಮುರಾಯಮಾ ವಿರುದ್ಧ ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ. ಆದರೆ ಸೆಮಿ ಫೈನಲ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತೆ ಲುಸಿಯಾ ಯೆಪೆಝ್‌ಗೆ 3-5ರಿಂದ ಸೋತಿದ್ದೇನೆ’ ಎಂದು ಅಂತಿಮ್ ಹೇಳಿದ್ದಾರೆ.