ಧರ್ಮಸ್ಥಳ ಪ್ರಕರಣ | ಎಸ್‍ಐಟಿ ತನಿಖೆಗೆ ತೊಂದರೆ ಮಾಡುವ ಉದ್ದೇಶ ಬಿಜೆಪಿಗಿದೆ : ಜಿ.ಪರಮೇಶ್ವರ್
"ಎನ್‍ಐಎ ತನಿಖೆಗೆ ವಹಿಸುವ ಅಗತ್ಯವಿಲ್ಲ"
ಬೆಂಗಳೂರು, ಸೆ.2: ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರು ಎಸ್‍ಐಟಿ ತನಿಖೆಗೆ ತೊಂದರೆ ಮಾಡುವ ಉದ್ದೇಶ ಹೊಂದಿರುವಂತೆ ಕಂಡುಬರುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ಈ ಪ್ರಕರಣದ ತನಿಖೆಯಲ್ಲಿ ಯಾವುದೇ ಲೋಪಗಳಿಲ್ಲ. ಹೀಗಾಗಿ ಎನ್‍ಐಎ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಹಲವು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದೇನೆ. ಆದರೂ ಬಿಜೆಪಿಯವರು ಅನೇಕ ರೀತಿಯಲ್ಲಿ ಒತ್ತಾಯ ಮಾಡುವ ಮೂಲಕ ಸ್ವರೂಪ ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಜಾರಿ ನಿರ್ದೇಶನಾಲಯವು ಫೇಮಾ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ತನಿಖೆ ಆರಂಭಿಸಿ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ಎನ್‍ಜಿಓ ಹಣ ಬಳಕೆಯಾಗಿರುವ ಬಗ್ಗೆ ವಿಚಾರಣೆ ನಡೆಸುವುದಾದರೆ ನಮ್ಮ ಅಭ್ಯಂತರವಿಲ್ಲ. ಈ.ಡಿ.ಯವರು ಹಣಕಾಸಿನ ವಿಚಾರಗಳ ಕುರಿತು ತನಿಖೆ ಮಾಡುತ್ತಾರೆ. ಎಸ್‍ಐಟಿ ತನ್ನ ಪಾಲಿನ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ದೂರುದಾರ ಚಿನ್ನಯ್ಯ ಅವರು ನಿಯಮ 164ರ ಅಡಿ ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆ ಆಧಾರದಲ್ಲಿ ತನಿಖೆ ನಡೆಸುತ್ತಿದೆ ಎಂದು ಜಿ.ಪರಮೇಶ್ವರ್ ಹೇಳಿದರು.
ಧರ್ಮಸ್ಥಳದ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವುದು ನನಗೆ ಗೊತ್ತಿಲ್ಲ. ಅವರಿಗೆ ಬೇರೆ ರೀತಿಯ ಮಾಹಿತಿಗಳು ಇರಬಹುದು. ನಾನು ಜವಾಬ್ದಾರಿಯುತ ಸಚಿವನಾಗಿ ತನಿಖೆ ನಡೆಯುವ ಸಂದರ್ಭದಲ್ಲಿ ಬೇರೆ ರೀತಿಯ ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಸೌಜನ್ಯ ಅವರ ಪ್ರಕರಣದಲ್ಲಿ ಬಿಜೆಪಿಯವರ ನಿಲುವುಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸೌಜನ್ಯ ಅಪಹರಣವಾಗಿರುವುದನ್ನು ಕಣ್ಣಾರೆ ನೋಡಿದ್ದಾಗಿ, ಮಹಿಳೆ ಹೇಳಿಕೆ ನೀಡಿರುವುದನ್ನೂ ಎಸ್‍ಐಟಿ ಗಮನಿಸುತ್ತದೆ ಎಂದು ಜಿ.ಪರಮೇಶ್ವರ್ ಹೇಳಿದರು.