ದಲಿತ, ಶೋಷಿತರ ಹೋರಾಟಗಳು ಸ್ವಾತಂತ್ರ್ಯ ಉದ್ಯಾನದಲ್ಲಿ, ಆರೆಸ್ಸೆಸ್ ಮೆರವಣಿಗೆ ರಾಜಧಾನಿಯ ಬೀದಿ-ಬೀದಿಗಳಲ್ಲಿ..!
‘ಕಾಂಗ್ರೆಸ್ ಸರಕಾರದ ನಡೆ ಪ್ರಶ್ನಿಸಿದ ಜನ ಸಾಮಾನ್ಯರು’
ಬೆಂಗಳೂರು, ಅ.12 : ಹೈಕೋರ್ಟ್ ಆದೇಶದ ನೆಪದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಾಗೂ ರ್ಯಾಲಿಗಳನ್ನು ನಡೆಸಲು ಸ್ವಾತಂತ್ರ್ಯ ಉದ್ಯಾನವನ(ಫ್ರೀಡಂ ಪಾರ್ಕ್)ದಲ್ಲಿ ಮಾತ್ರ ಸೀಮಿತ ಎಂದು ಪೊಲೀಸರು ಹೇಳುತ್ತಾರೆ. ಆದರೆ, ರವಿವಾರ(ಅ.12) ನಗರಾದ್ಯಂತ ಆರೆಸ್ಸೆಸ್ ಮೆರವಣಿಗೆ ಕೈಗೊಂಡ ಹಿನ್ನೆಲೆ ಗೃಹ ಇಲಾಖೆ, ಪೊಲೀಸ್ ಅಧಿಕಾರಿಗಳ ವಿರುದ್ಧ ಹೋರಾಟಗಾರರು, ವಿದ್ಯಾರ್ಥಿಗಳು, ಯುವಜನತೆ ಹಾಗೂ ವಕೀಲರ ಸಮೂಹ ಆಕ್ರೋಶ ಹೊರಹಾಕಿದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹಾಗೂ ನಾಗರಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗಬಾರದೆಂದು ಹೋರಾಟ, ಮೆರವಣಿಗೆ, ರ್ಯಾಲಿಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸಲಾಗಿದೆ. ಈವರೆಗಿನ ಎಲ್ಲ ಹೋರಾಟಗಳು ನಿಗದಿತ ಸ್ಥಳದಲ್ಲೇ ಜರುಗುತ್ತಿವೆ. ಈ ನಡುವೆ ಕೋರ್ಟ್ ಆದೇಶವನ್ನೇ ಉಲ್ಲಂಘಿಸಿ ರವಿವಾರದಂದು ಜಯನಗರ, ಚಾಮರಾಜಪೇಟೆ, ಕಬ್ಬನ್‍ಪೇಟೆ, ಸಂಪಂಗಿ ರಾಮನಗರ, ಇಂದಿರಾನಗರ ಸೇರಿದಂತೆ ವಿವಿಧೆಡೆ ಬೀದಿ-ಬೀದಿಗಳಲ್ಲಿ ಆರೆಸ್ಸೆಸ್ ನಡೆಸಿದ ಪಥಸಂಚಲನಕ್ಕೆ ಪೊಲೀಸ್ ಭದ್ರತೆ ಒದಗಿಸುವ ಮುಖೇನ ಪ್ರತ್ಯಕ್ಷವಾಗಿಯೇ ಸಹಕರಿಸಿದ ರಾಜ್ಯ ಸರಕಾರದ ನಡೆಗೆ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಕ್ಕಿಪಿಕ್ಕಿ ಸಮುದಾಯವು ವಿವಿಧ ಬೇಡಿಕೆಗಳನ್ನಿಟ್ಟು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ಕೇಳಿದರೂ ಕೊಟ್ಟಿಲ್ಲ. ಅಲ್ಲದೆ, ಕೆಲದಿನಗಳ ಹಿಂದೆ ಸ್ವಾತಂತ್ರ್ಯ ಉದ್ಯಾನದಲ್ಲೇ ಪ್ರತಿಭಟಿಸಲು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಕ್ಕಿರಲಿಲ್ಲ. ಈ ನಡುವೆ ನಗರದಲ್ಲಿ ಆರೆಸ್ಸೆಸ್ ಪಥಸಂಚಲನ ನಡೆಸಿದ್ದು, ಸರಕಾರದ ವಿರುದ್ಧ ಶೀಘ್ರದಲ್ಲೇ ಹೋರಾಟ ರೂಪಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ಜನಸಾಮಾನ್ಯರ ಮೂಲಭೂತ ಹಕ್ಕುಗಳ ರಕ್ಷಣೆಗೆ ನಡೆಸುವ ಯಾವುದೇ ಹೋರಾಟವನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಮಾಡಬೇಕೆಂಬ ಬಿಜೆಪಿ ಸರಕಾರದ ಕಾರ್ಯ ನೀತಿಯನ್ನೇ ಈಗಿನ ಕಾಂಗ್ರೆಸ್ ಸರಕಾರವೂ ಮುಂದುವರೆಸಿಕೊಂಡು ಬರುತ್ತಿದೆ. ಹೀಗಿರುವಾಗ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆಯೇ ನಂಬಿಕೆ ಇಲ್ಲದ ಆರೆಸ್ಸೆಸ್‍ಗೆ ನಗರದೆಲ್ಲೆಡೆ ಪಥಸಂಚಲನ ನಡೆಸಲು ಅವಕಾಶ ಕೊಟ್ಟಿದ್ದೇಕೆ? ಎಂಬುದು ಹೋರಾಟಗಾರರ ಒಕ್ಕೊರಲಿನ ಪ್ರಶ್ನೆಯಾಗಿದೆ.
‘ಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ, ಪ್ರತಿಭಟನೆಗಳನ್ನು ನಡೆಸಲು ಫ್ರೀಡಂ ಪಾರ್ಕ್‍ನಲ್ಲಿ ಮಾತ್ರ ಅವಕಾಶ ನೀಡುವ ರಾಜ್ಯ ಸರಕಾರ, ಆರೆಸ್ಸೆಸ್ ಪಥಸಂಚಲನಕ್ಕೆ ಬೆಂಗಳೂರಿನ ಬಹುತೇಕ ಕಡೆ ಅವಕಾಶ ಕೊಟ್ಟಿದೆ. ರಾಜ್ಯದಲ್ಲಿ ಜನಸಾಮಾನ್ಯರಿಗೆ ಒಂದು ನಿಯಮ, ಆರೆಸ್ಸೆಸ್‍ಗೆ ಒಂದು ನಿಯಮವಿದೆಯೇ?. ರೈತರು, ಮಹಿಳೆಯರು, ಕಾರ್ಮಿಕರು, ವ್ಯಾಪಾರಸ್ಥರು, ಯುವಕರು ಸ್ವಾತಂತ್ರ್ಯ ಉದ್ಯಾನ ಬಿಟ್ಟು ಬೇರೆಡೆ ಪ್ರತಿಭಟಿಸಿದರೆ ಎಫ್‍ಐಆರ್ ದಾಖಲಿಸುವ ಪೊಲೀಸ್ ಇಲಾಖೆ, ಆರೆಸ್ಸೆಸ್ ರ್ಯಾಲಿಗೆ ಅವಕಾಶ ಕೊಟ್ಟು ಭದ್ರತೆ ಒದಗಿಸಿದ್ದು ಯಾವ ನ್ಯಾಯ?’ ಎಂಬುದು ವಕೀಲ ವಿನಯ್ ಶ್ರೀನಿವಾಸ್‍ರ ಪ್ರಶ್ನೆಯಾಗಿದೆ.
‘ಸಂವಿಧಾನದ ವ್ಯಾಪ್ತಿಯೊಳಗೆ ಸವಲತ್ತುಗಳಿಗಾಗಿ ಸರಕಾರದ ಗಮನಸೆಳೆಯಬೇಕೆಂಬ ದಮನಿತ ಸಮುದಾಯಗಳ ಹೋರಾಟಗಳನ್ನು ಸರಕಾರ ಹಾಗೂ ಪೊಲೀಸ್ ಇಲಾಖೆ ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸುತ್ತದೆ. ಇದರಿಂದ ದಮನಿತರ ಕೂಗು ಸರಕಾರದ ಕಿವಿಗೆ ಮುಟ್ಟುವುದಿಲ್ಲ. ಒಂದು ವೇಳೆ ಸ್ವಾತಂತ್ರ್ಯ ಉದ್ಯಾನದಿಂದ ಹೋರಾಟದ ಸ್ವರೂಪ ಸ್ವಲ್ಪ ಹೆಚ್ಚಾದರೆ ಸಾಕು ಹೋರಾಟಗಾರರ ಮೇಲೆ ನೂರಾರು ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಆದರೆ, ಸಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿರುವ ಸಂಘಪರಿವಾರದ ಚಟುವಟಿಕೆಗಳಿಗೆ ಸರಕಾರ ಬೆಂಬಲಿಸುವುದು ಸಂವಿಧಾನಕ್ಕೆ ಮಾಡಿದ ದ್ರೋಹ’ ಎಂಬುದು ಪ್ರಗತಿಪರರ ಆಕ್ರೋಶವಾಗಿದೆ.
ಶಸ್ತ್ರಾಸ್ತ್ರ ಹಿಡಿದ ಆರೆಸ್ಸೆಸ್‍ಗೆ ಅವಕಾಶವೇ?: ‘ಸಂವಿಧಾನದ ಅನುಚ್ಛೇದ 19(1)(ಬಿ)ನಲ್ಲಿ ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಹಕ್ಕು ಎಲ್ಲರಿಗಿದೆ. ಆದರೆ, ಆರೆಸ್ಸೆಸ್ ಮೆರವಣಿಗೆಯಲ್ಲಿ ಕೈಯಲ್ಲೊಂಡು ಲಾಟಿ(ಕೋಲು) ಹಿಡಿದುಕೊಂಡಿದ್ದಾರೆ. ಅದು ಶಸ್ತ್ರಾಸ್ತ್ರ ಅಲ್ಲವೇ? ಅಥವಾ ಅದು ಅವರ ವಾಕಿಂಗ್ ಸ್ಟಿಕ್ ಆಗಿದೆಯೇ? ಅವರೆಲ್ಲರೂ ಮುದುಕರಾಗಿದ್ದಾರಾ, ನಡೆಯಲು ಕಷ್ಟವಾಗಿದೆಯೇ?. ಗೃಹ ಇಲಾಖೆ ಮತ್ತು ಪೊಲೀಸರು ಯಾವ ಆಧಾರದ ಮೇಲೆ ಇವರಿಗೆ ಅವಕಾಶ ಕೊಟ್ಟರು. ಇದು ಜನಸಾಮಾನ್ಯರಿಗೇಕಿಲ್ಲ?’
-ವಿನಯ್ ಶ್ರೀನಿವಾಸ್, ವಕೀಲ
‘ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿ ಕೆರೆ ಕೊಡಿಯ ಬಳಿ ವಾಸ ಮಾಡುತ್ತಿರುವ ಹಕ್ಕಿಪಿಕ್ಕಿ ಸಮುದಾಯದ ನಿವಾಸಿಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜಿಲ್ಲಾಧಿಕಾರಿಗೆ ಮನವಿ ನೀಡಲು ಪೊಲೀಸರು ಹೈಕೋರ್ಟ್ ಆದೇಶದ ನೆಪದಲ್ಲಿ ಅನುಮತಿ ನಿರಾಕರಿಸಿದ್ದಾರೆ. ‘ನಗರದಲ್ಲಿ ಎಲ್ಲೂ ಧರಣಿ, ಪ್ರತಿಭಟನೆಗೆ ಅವಕಾಶವಿಲ್ಲ. ನೀವು ಏನಾದರೂ ಮಾಡ್ತೀರಾ ಅಂದ್ರೇ ಫ್ರೀಡಂ ಪಾರ್ಕ್‍ಗೆ ಹೋಗಿ ಎನ್ನುತ್ತಾರೆ’ ಪೊಲೀಸರು. ಆದರೆ, ಧರ್ಮದ್ವೇಷವನ್ನು ಸೃಷ್ಟಿಸಲು ನಗರದೆಲ್ಲೆಡೆ ಆರೆಸ್ಸೆಸ್ ರ್ಯಾಲಿಗೆ ಕಾಂಗ್ರೆಸ್ ಸರಕಾರ ಅನುಮತಿ ನೀಡಿದ್ದು ಹೇಗೇ?. ಬಡಜನರ ಬಗ್ಗೆ ಈ ಸರಕಾರಕ್ಕೆ ತಾತ್ಸಾರವೇಕೇ?’
-ವಿ.ಮೂರ್ತಿ ಪ್ರಧಾನ ಕಾರ್ಯದರ್ಶಿ ‘ವಿಸಿಕೆ-ಕರ್ನಾಟಕ’