‘ಪರಿಶಿಷ್ಟ ಜಾತಿಗಳ ಒಳಮೀಸಲಾತಿ’ ಸಮಗ್ರ ಸಮೀಕ್ಷೆಯ ಅವಧಿ ಜೂ.22ರ ವರೆಗೆ ವಿಸ್ತರಣೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ನೇತೃತ್ವದಲ್ಲಿ ನಡೆಯುತ್ತಿರುವ ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಅವಧಿಯನ್ನು ಜೂ.22ರ ವರೆಗೆ ವಿಸ್ತರಿಸಲಾಗಿದೆ.
ಈಗಾಗಲೇ ಜೂ.6ರ ವರೆಗೆ ರಾಜ್ಯಾದ್ಯಂತ ನಡೆಸಲಾದ ಸಮೀಕ್ಷೆಯಲ್ಲಿ ಶೇ.90ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಉಳಿದಂತೆ ಸುಮಾರು ಶೇ.10ರಷ್ಟು ಪ್ರಗತಿಯನ್ನು ಸಾಧಿಸಬೇಕಾಗಿದೆ. ಆದುದರಿಂದ ಸಮಯ ವಿಸ್ತರಿಸಲಾಗಿದೆ.
ಕೆಲವು ಪರಿಶಿಷ್ಟ ಜಾತಿಗೆ ಸೇರಿದ ಸಂಘ-ಸಂಸ್ಥೆಗಳು ಸಮೀಕ್ಷೆಯ ಅವಧಿಯನ್ನು ಮತ್ತೆ ವಿಸ್ತರಿಸಬೇಕು ಎಂದು ಮನವಿಯನ್ನು ಸಲ್ಲಿಸಿರುತ್ತಾರೆ. ಆದರೆ, ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಗಣತಿದಾರರನ್ನಾಗಿ ನೇಮಕ ಮಾಡಲಾಗಿದ್ದ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಹೀಗಾಗಿ, ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಇವರೆಗೂ ಭಾಗವಹಿಸದೇ ಇರುವ ಕರ್ನಾಟಕಕ್ಕೆ ಸೇರಿದ ಪರಿಶಿಷ್ಟ ಜಾತಿ ಕುಟುಂಬದವರು ರಾಜ್ಯದಲ್ಲಿನ ಒಟ್ಟು 9400 ನಾಗರೀಕ ಸೇವಾ ಕೇಂದ್ರಗಳಾದ, ಕರ್ನಾಟಕ ಒನ್, ಬೆಂಗಳೂರು ಒನ್, ಹಾಗೂ 198 ಬಿಬಿಎಂಪಿ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ 2025ನೇ ಜೂನ್ 22ರ ವರೆಗೂ ತಮ್ಮ ಮಾಹಿತಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಸದರಿ ಅವಕಾಶವನ್ನು ಕಲ್ಪಿಸಲಾಗುವುದು. ಮಾಹಿತಿಯನ್ನು ನಮೂದಿಸಲು ಸಾರ್ವಜನಿಕರಿಗೆ, ತಮ್ಮ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ಸಂಖ್ಯೆಯ ಅವಶ್ಯಕತೆಯಿರುತ್ತದೆ.
https://schedulecastesurvey.karnataka.gov.in/selfdeclaration ಲಿಂಕ್ ಮೂಲಕ ಆನ್ಲೈನ್‍ನಲ್ಲಿ ಪರಿಶಿಷ್ಟ ಜಾತಿ ಕುಟುಂಬದವರು ಸ್ವಯಂ ಘೋಷಣೆ ಮಾಡಿಕೊಳ್ಳಲು ಜೂ.22 ರವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಶೇ.46ರಷ್ಟು ಸಮೀಕ್ಷೆ: ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಶೇ.46ರಷ್ಟು ಆಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದ ಸಮೀಕ್ಷೆ ನಡೆದಿದೆ. ಬೆಂಗಳೂರು ನಗರ(ಬಿಬಿಎಂಪಿ ಹೊರತುಪಡಿಸಿ)-ಶೇ.79, ಬೆಂಗಳೂರು ಗ್ರಾಮಾಂತರ-ಶೇ.87, ದಕ್ಷಿಣ ಕನ್ನಡ-ಶೇ.89, ಬೀದರ್, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಶೇ. 89ರಷ್ಟು ಸಮೀಕ್ಷೆ ನಡೆಸಲಾಗಿದೆ. ಇದುವರೆಗೂ 10,50,0420 ಜನರ ಸಮೀಕ್ಷೆ ಮಾಡಲಾಗಿದೆ. ಒಟ್ಟು ಶೇ.90ರಷ್ಟು ಸಮೀಕ್ಷೆ ಪ್ರಗತಿಹೊಂದಿದೆ ಎಂದು ಆಯೋಗ ಮಾಹಿತಿ ನೀಡಿದೆ.