×
Ad

ರಾಜ್ಯದ 5 ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ

Update: 2024-03-01 08:11 IST

ಬೆಂಗಳೂರು: ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ 5 ಜಿಲ್ಲಾಸ್ಪತ್ರೆಗಳಲ್ಲಿ ಕ್ರಿಟಿಕಲ್ ಕೇರ್ ನಿರ್ಮಾಣಕ್ಕೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವೆನ್ ಲಾಕ್ ಆಸ್ಪತ್ರೆ, ವಿಜಯನಗರ ಜಿಲ್ಲಾಸ್ಪತ್ರೆ, ದೊಡ್ಡಬಳ್ಳಾಪುರ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗಳಲ್ಲಿ ತಲಾ 50 ಬೆಡ್ ಗಳ ತೀವ್ರ ನಿಗಾ ಆರೈಕೆ ಘಟಕಗಳ ಸ್ಥಾಪನೆಗೆ ಸಂಪುಟದಿಂದ ಅನುಮೋದನೆ ದೊರೆತಿದೆ. ಈ 5 ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಕಾಮಗಾರಿಗಳಿಗೆ ರಾಷ್ಟ್ರೀಯ ಆರೋಗ್ಯ ಯೋಜನೆ PM-ABHIM ಅಡಿ ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ವೆಚ್ಚವನ್ನ ಭರಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.

137.75 ಕೋಟಿ ವೆಚ್ವದಲ್ಲಿ 50 ಬೆಡ್ ಕ್ರಿಟಿಕಲ್ ಕೇರ್ ಗಳ ಸ್ಥಾಪನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಂಗಳೂರು ನಗರ ಜಿಲ್ಲೆಯ ಸಿ.ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಹಾಸಿಗೆಯ ತೀವ್ರ ನಿಗಾ ಆರೈಕೆ ಘಟಕವನ್ನ 45 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಉಳಿದಂತೆ ನಾಲ್ಕು ಜಿಲ್ಲಾಸ್ಪತ್ರೆಗಳಲ್ಲಿ ತಲಾ 50 ಬೆಡ್ ಗಳ ಕ್ರಿಟಿಕಲ್ ಕೇರ್ ಘಟಕಗಳ ನಿರ್ಮಾಣವನ್ನ ತಲಾ 24 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಅನುಮೋದನೆಗೊಂಡ ಕ್ರಿಟಿಕಲ್ ಕೇರ್ ಗಳಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ 5 ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ 6 ಆಸ್ಪತ್ರೆಗಳು ಸೇರಿದಂತೆ ಒಟ್ಟು 11 ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News