ಕೆಪಿಸಿಎಲ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ : ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜು.23: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ(ಕೆಪಿಸಿಎಲ್) ಖಾಲಿ ಇರುವ ಹುದ್ದೆಗಳ ಭರ್ತಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬುಧವಾರ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ‘56ನೇ ಸಂಸ್ಥಾಪನಾ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಈಗ ಸ್ವಾವಲಂಭಿಯಾಗಿದ್ದು, ಇದರಲ್ಲಿ ಕೆಪಿಸಿಎಲ್ ನೌಕರರ ಶ್ರಮ ಅಪಾರವಿದೆ. ಕೆಪಿಸಿಎಲ್ ಅಧ್ಯಕ್ಷನಾಗಿ ನಾನೂ ಕೂಡ ಕೆಪಿಸಿಎಲ್ ನೌಕರರಲ್ಲಿ ಒಬ್ಬನಾಗಿದ್ದೀನಿ. ಅತೀ ಹೆಚ್ಚು ಕಾಲ ಕೆಪಿಸಿಎಲ್ ಅಧ್ಯಕ್ಷನಾಗಿ ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿದ್ದೇನೆ. ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಕೆಪಿಸಿಎಲ್ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ಉತ್ತಮವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದೆ ಎಂದು ಅವರು ತಿಳಿದರು.
ನಮ್ಮ ಮೇಲೆ, ಅಧಿಕಾರಿಗಳ ಮೇಲೆ ಸಮಾಜದ ಋಣ ಇದೆ. ನಾವಾಗಲೀ, ಅಧಿಕಾರಿಗಳಾಗಲೀ ಸಮಾಜದ ಹಣದಲ್ಲಿ ಬೆಳೆದಿದ್ದೇವೆ. ಆದ್ದರಿಂದ ಸಮಾಜದ ಋಣ ತೀರಿಸುವ ಕಾಳಜಿಯಿಂದ ಕೆಲಸ ಮಾಡಬೇಕಿದೆ. ನಾವು ಓದುವಾಗ ಊರಲ್ಲಿ ಕರೆಂಟ್ ಇರಲಿಲ್ಲ. ಸೀಮೆಎಣ್ಣೆ ದೀಪದಲ್ಲಿ ಓದಿ ಮೇಲೆ ಬಂದಿದ್ದೇವೆ. ಈಗ ವರ್ಷಕ್ಕೆ 20 ಸಾವಿರ ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣವನ್ನು ರೈತರ ಪರವಾಗಿ ಸರಕಾರ ಕೊಡುತ್ತಿದೆ. ಕೆಪಿಸಿಎಲ್ ನೌಕರರ ಶ್ರಮದಿಂದ ವಿದ್ಯುತ್ ರೈತರಿಗೆ ತಲುಪುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಧನ ಸಚಿವ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ನಸೀರ್ ಅಹಮದ್, ಇಂಧನ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಮತ್ತಿತರರು ಇದ್ದರು.
‘ತಲಾ ಆದಾಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎನ್ನುವ ವರದಿಗಳು ಬಂದಿವೆ. ಈ ಸಾಧನೆ ನಾವು ಮಾಡಿದ್ದೇವೆ. ನಮ್ಮಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ಇದೆ. ಇದು ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು. ನಮಗೆ ಶಿಕ್ಷಣ ಸಿಕ್ಕ ಮೇಲೆ ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು’
-ಸಿದ್ದರಾಮಯ್ಯ, ಮುಖ್ಯಮಂತ್ರಿ