ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು : ಅಜಯ್ ಸಿಂಗ್
ಬೆಂಗಳೂರು : ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಮತ್ತು ನಿರ್ಧಾರ ಪ್ರಕ್ರಿಯೆ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಸಿಂಗ್ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದಂತಹ ಸಂವಿಧಾನಾತ್ಮಕ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ, ಒಮ್ಮತ ಮತ್ತು ಸಾರ್ವಜನಿಕ ವಿಶ್ವಾಸ ಅತ್ಯಂತ ಮುಖ್ಯ ಎಂದು ಹೇಳಿದರು.
ಇದು ಯಾವುದೋ ಒಂದು ಪಕ್ಷದ ಪ್ರಶ್ನೆಯಾಗಿ ಉಳಿದಿಲ್ಲ. ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆಯೋಗದೊಳಗಿನ ನಿರ್ಧಾರ ಪ್ರಕ್ರಿಯೆಯ ಕುರಿತು ಪ್ರಶ್ನೆಗಳು ಎದ್ದಿರುವಾಗ, ಜನತೆಗೆ ಸ್ಪಷ್ಟನೆ ನೀಡುವುದು ಮುಖ್ಯ ಚುನಾವಣಾ ಆಯುಕ್ತರ ಜವಾಬ್ದಾರಿ ಎಂದು ಹೇಳಿದರು.
ಇತ್ತೀಚಿನ ಮಾಧ್ಯಮ ವರದಿಗಳು, ಚುನಾವಣಾ ಆಯೋಗದ ಇಬ್ಬರು ಸಹ ಆಯುಕ್ತರು ಕೆಲವು ಕ್ರಮಗಳ ಕುರಿತು ಆಕ್ಷೇಪ ದಾಖಲಿಸಿದ್ದರೆಂದು ಹೇಳಿವೆ. ಆದರೆ ಚುನಾವಣಾ ಆಯೋಗವು ಅಂತಿಮ ನಿರ್ಧಾರಗಳು ಪೂರ್ಣ ಆಯೋಗದ ಏಕಮತದ ತೀರ್ಮಾನಗಳಾಗಿವೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳು ಚರ್ಚಾ ಪ್ರಕ್ರಿಯೆಯ ಭಾಗವೆಂದು ಸ್ಪಷ್ಟಪಡಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೆ ಸಂಸ್ಥೆಯೂ ಪ್ರಶ್ನೆಗಳಿಗೆ ಮೀರಿದುದಲ್ಲ. ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಆಯೋಗ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಸ್ತುತ ಉದ್ಭವಿಸಿರುವ ವಿವಾದಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಚುನಾವಣಾ ಆಯೋಗದ ಮೇಲಿನ ವಿಶ್ವಾಸವೇ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯ ಆಧಾರ. ಆ ವಿಶ್ವಾಸ ಉಳಿಯಬೇಕಾದರೆ ನಿರ್ಧಾರಗಳು ಪಾರದರ್ಶಕವಾಗಿರಬೇಕು ಮತ್ತು ಉದ್ಭವಿಸಿರುವ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರ ದೊರೆಯಬೇಕು ಎಂದು ತಿಳಿಸಿದರು.