ರೇಣುಕಾಸ್ವಾಮಿ ಕೊಲೆ ಪ್ರಕರಣ | ಭಾಗಶಃ ಪ್ರದೂಶ್ ರಾವ್ ಹೇಳಿಕೆ ದಾಖಲು, ನಾಳೆ ಪೂರ್ಣಗೊಳ್ಳಲಿದೆ ಮಾಫಿ ಸಾಕ್ಷಿ
ರೇಣುಕಾಸ್ವಾಮಿ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೆ.28) ಪ್ರಕರಣದ 14ನೇ ಆರೋಪಿಯಾಗಿದ್ದ, ಈಗ ಮಾಫಿ ಸಾಕ್ಷಿಯಾಗಿರುವ ಪ್ರದೂಶ್ ರಾವ್ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯಿತು. 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತ ಎಂ.ಸಂಬ್ರಾಣಿ ಅವರ ಮುಂದೆ ಸತತ ನಾಲ್ಕು ಗಂಟೆಗೂ ಅಧಿಕ ಕಾಲ ಹೇಳಿಕೆ ದಾಖಲು ಮಾಡಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಶಃ ಹೇಳಿಕೆಯನ್ನು ನ್ಯಾಯಾಲಯ ದಾಖಲು ಮಾಡಿಕೊಂಡಿದ್ದು, ಉಳಿದ ಹೇಳಿಕೆಯನ್ನು ನಾಳೆ ದಾಖಲು ಮಾಡಲಾಗುವುದು ಎಂದು ಪ್ರಕರಣವನ್ನು ನಾಳೆಗೆ ಮುಂದೂಡಲಾಗಿದೆ. ಇಂದು ಬೆಳಗ್ಗೆ ನ್ಯಾಯಾಲಯ ಕಲಾಪ ಆರಂಭವಾಗುತ್ತಿದ್ದಂತೆ ಪ್ರದೂಶ್ ರಾವ್ ರನ್ನು ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ಹಾಜರಿದ್ದು, ಪ್ರದೂಶ್ ರಾವ್ ಹೇಳಿಕೆ ದಾಖಲು ಮಾಡುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನಾಲ್ಕು ಗಂಟೆಗಳಿಗೂ ಅಧಿಕ ಕಾಲದ ಈ ಹೇಳಿಕೆ ದಾಖಲು ವೇಳೆ ಪ್ರದೂಶ್ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಇಂಚಿಂಚೂ ನ್ಯಾಯಾಲಯದ ಎದುರು ಬಹಿರಂಗಪಡಿಸಿದರು.
ಪ್ರದೂಶ್ ಹೇಳಿಕೆ ದಾಖಲು ಮಾಡುವ ವೇಳೆ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಜೈಲಿನಲ್ಲಿರುವ ಎಲ್ಲ ಆರೋಪಿಗಳು ವಿಡೀಯೋ ಕಾನ್ಪರೆನ್ಸ್ ನಲ್ಲಿ ಹಾಜರಿದ್ದರು.