ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಸಿಎಂ ಡಿ.ಕೆ.ಶಿವಕುಮಾರ್; ರಸ್ತೆ ಸಂಪರ್ಕ, ಸುರಂಗ ಯೋಜನೆ ಸೇರಿ ಬಾಕಿ ಪ್ರಸ್ತಾವನೆಗಳಿಗೆ ಶೀಘ್ರ ಪರಿಹಾರಕ್ಕೆ ಮನವಿ
ಹೊಸದಿಲ್ಲಿ : ಬೆಂಗಳೂರಿನ ಪ್ರಮುಖ ನಗರ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ರಕ್ಷಣಾ ಭೂಮಿ ಹಾಗೂ ಅನುಮತಿ ವಿಚಾರಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಮುಖ್ಯಮಂತ್ರಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಬೆಂಗಳೂರಿನ ಐದು ನಗರ ಪಾಲಿಕೆಗಳು ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ ರಕ್ಷಣಾ ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಚಿವಾಲಯ ನೀಡುತ್ತಿರುವ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಾಕಿ ಇರುವ ಏಳು ಪ್ರಮುಖ ಪ್ರಸ್ತಾವನೆಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವಂತೆ ಮನವಿ ಮಾಡಿದರು.
ಇಬ್ಲೂರು ಬಳಿ 730 ಎಕರೆ ಜಾಗದಲ್ಲಿ ಸಾರ್ವಜನಿಕ ಉದ್ಯಾನ: ಇಬ್ಲೂರು ಫೈರಿಂಗ್ ರೇಂಜ್ ಸಮೀಪದ ಸುಮಾರು 730 ಎಕರೆ ರಕ್ಷಣಾ ಭೂಮಿಯನ್ನು ಬೆಂಗಳೂರಿನ ಶಾಶ್ವತ ಸಾರ್ವಜನಿಕ ಉದ್ಯಾನ ಹಾಗೂ ಹಸಿರು ಉಸಿರಾಟದ ತಾಣವಾಗಿ ಅಭಿವೃದ್ಧಿಪಡಿಸುವುದು ಪ್ರಮುಖ ಪ್ರಸ್ತಾವನೆಗಳಲ್ಲಿ ಒಂದಾಗಿದೆ.
ಈ ಜಾಗದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡದೆ, ಸಂಪೂರ್ಣವಾಗಿ ಸಾರ್ವಜನಿಕ ಉದ್ಯಾನಕ್ಕಾಗಿ ಬಳಸುವಂತೆ ರಾಜ್ಯ ಸರಕಾರ ಪ್ರಸ್ತಾಪಿಸಿದೆ. ಭೂಮಿಯ ಮಾಲಕತ್ವ ರಕ್ಷಣಾ ಇಲಾಖೆಯಲ್ಲಿಯೆ ಉಳಿಯಲಿದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.
43.838 ಎಕರೆ ರಕ್ಷಣಾ ಭೂಮಿಯಲ್ಲಿರುವ ಕೊಳೆಗೇರಿಗಳ ಸಮಸ್ಯೆ: ಬೆಂಗಳೂರಿನ ರಕ್ಷಣಾ ಭೂಮಿಯಲ್ಲಿ ಸುಮಾರು 43.838 ಎಕರೆ ಪ್ರದೇಶದಲ್ಲಿ ಅಧಿಸೂಚಿತ 10 ಕೊಳೆಗೇರಿಗಳಿದ್ದು, ಅವುಗಳ ಪುನರ್ವಸತಿ ಹಾಗೂ ಅಭಿವೃದ್ಧಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಇದಕ್ಕಾಗಿ ಬೆಂಗಳೂರಿನೊಳಗೆ ಸಮಾನ ಮೌಲ್ಯದ ಭೂಮಿ ಗುರುತಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ, ಸೂಕ್ತ ಪರ್ಯಾಯ ಸ್ಥಳದಲ್ಲಿ ಸಮಾನ ವಿಸ್ತೀರ್ಣದ ಸರಕಾರಿ ಭೂಮಿಯನ್ನು ನೀಡುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಮುಂದಿಟ್ಟಿದ್ದಾರೆ. ಮುಂಗಾರು ಮಳೆಯಿಂದ ಕೊಳೆಗೇರಿ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತಿರುವುದರಿಂದ ತಕ್ಷಣ ದುರಸ್ತಿ ಮತ್ತು ಪುನರ್ ಅಭಿವೃದ್ಧಿಗೆ ಅನುಮತಿ ನೀಡುವಂತೆಯೂ ಕೋರಲಾಗಿದೆ.
ವಿಮಾನ ನಿಲ್ದಾಣಗಳ ಸುತ್ತಲಿನ ಕಟ್ಟಡ ಎತ್ತರ ನಿಯಮ ಪರಿಷ್ಕರಣೆಗೆ ಮನವಿ: ಎಚ್‍ಎಎಲ್ ವಿಮಾನ ನಿಲ್ದಾಣ ಹಾಗೂ ಯಲಹಂಕ ವಾಯುಪಡೆ ನಿಲ್ದಾಣದ ಸುತ್ತಲಿನ ಕಟ್ಟಡಗಳ ಎತ್ತರ ನಿರ್ಬಂ ಧವೂ ಪ್ರಮುಖ ವಿಚಾರವಾಗಿದೆ. ರಕ್ಷಣಾ ವಿಮಾನ ನಿಲ್ದಾಣಗಳ 20 ಕಿ.ಮೀ. ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ನಿರ್ಬಂ ಧಗಳನ್ನು ಮರುಪರಿಶೀಲಿಸುವಂತೆ ರಾಜ್ಯ ಸರಕಾರ ಕೋರಿದೆ.
ವಿಮಾನ ಸುರಕ್ಷತೆಯನ್ನು ಕಾಪಾಡುವುದರ ಜೊತೆಗೆ ಬೆಂಗಳೂರಿನ ನಗರಾಭಿವೃದ್ಧಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಏರೋಡ್ರೋಮ್ ರೆಫರೆನ್ಸ್ ಪಾಯಿಂಟ್‍ನಿಂದ 15 ಕಿ.ಮೀ. ವ್ಯಾಪ್ತಿಯೊಳಗೆ ಮಾತ್ರ ಕಡ್ಡಾಯ ಎನ್‍ಒಸಿ ಅಗತ್ಯವಾಗುವಂತೆ ನಿಯಮ ರೂಪಿಸುವ ಪ್ರಸ್ತಾವನೆಯನ್ನು ಸರಕಾರ ಮುಂದಿಟ್ಟಿದೆ.
ಅಗರಂ–ಸರ್ಜಾಪುರ ರಸ್ತೆ ಸಂಪರ್ಕ: ಸರಕಾರಿ ಆಸ್ಪತ್ರೆ ಸಮೀಪದ ಲೋವರ್ ಅಗರಂ ರಸ್ತೆಯಿಂದ ಈಜಿಪುರ ಜಂಕ್ಷನ್ ಮೂಲಕ ಸರ್ಜಾಪುರ ರಸ್ತೆಯನ್ನು ಸಂಪರ್ಕಿಸುವ 24 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ರಕ್ಷಣಾ ಭೂಮಿಯನ್ನು ಒದಗಿಸುವಂತೆ ಮನವಿ ಮಾಡಲಾಗಿದೆ.
ಬೆಳ್ಳಂದೂರು ಕೆರೆಯ ಸಮೀಪ ಸಾಗುವ ಈ ರಸ್ತೆ ಪೂರ್ವ ಮತ್ತು ದಕ್ಷಿಣ ಬೆಂಗಳೂರಿನ ನಡುವಿನ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಒಳವರ್ತುಲ ಹಾಗೂ ಹೊರವರ್ತುಲ ರಸ್ತೆ ಮೇಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಯೋಜನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಗುತ್ತಿಗೆ ನೀಡಲಾಗಿರುವುದರಿಂದ, ಶೀಘ್ರ ಕಾಮಗಾರಿ ಆರಂಭಿಸಲು ಅನುಮತಿ ನೀಡುವಂತೆ ರಾಜ್ಯ ಸರಕಾರ ಕೋರಿದೆ.
ಹೆಬ್ಬಾಳ ಬಳಿ ಟ್ವಿನ್ ಟನಲ್‍ಗೆ ರಕ್ಷಣಾ ಭೂಮಿ: ಪ್ರಸ್ತಾವಿತ ಬೆಂಗಳೂರು ನಗರ ವಾಹನ ಸಂಚಾರ ಅವಳಿ ಸುರಂಗ ಯೋಜನೆಗೆ ಹೆಬ್ಬಾಳ ಬಳಿ ರ್ಯಾಂಪ್ ನಿರ್ಮಿಸಲು 2.039 ಎಕರೆ ರಕ್ಷಣಾ ಭೂಮಿಯ ಅಗತ್ಯವಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಅದೇ ರೀತಿ ಮೆಖ್ರಿ ಸರ್ಕಲ್ ಸಮೀಪದ ರಕ್ಷಣಾ ಪ್ರದೇಶದ ಮೂಲಕ ಸುರಂಗ ಹಾದುಹೋಗಲು ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ. ಇದರಿಂದ ಮೇಲ್ಮೈಯಲ್ಲಿರುವ ರಕ್ಷಣಾ ಭೂಮಿಗೆ ಯಾವುದೇ ಅಡಚಣೆ ಉಂಟಾಗದಂತೆ ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ.
ಈ ಯೋಜನೆಗೆ ರಕ್ಷಣಾ ಇಲಾಖೆಯಿಂದ ಪ್ರಸ್ತಾಪಿಸಲಾಗಿರುವ ಭೂಮಿ ವೆಚ್ಚದ ಶೇ.33ರಷ್ಟು ಲೈಸೆನ್ಸ್ ಶುಲ್ಕ, ಅಂದಾಜು 60.72 ಕೋಟಿ ರೂ. ದುಬಾರಿಯಾಗಿದ್ದು, ಈ ಶುಲ್ಕವನ್ನು ಶೇ.2ಕ್ಕೆ ಇಳಿಸುವಂತೆ ಮನವಿ ಮಾಡಲಾಗಿದೆ.
ವಿಮಾನ ನಿಲ್ದಾಣ ರಸ್ತ್ತೆ-ಸರೋವರ ಲೇಔಟ್ ಸಂಪರ್ಕ: ಬಳ್ಳಾರಿ ರಸ್ತೆ(ವಿಮಾನ ನಿಲ್ದಾಣ ರಸ್ತೆ)ಯಿಂದ ಸರೋವರ ಲೇಔಟ್‍ಗೆ ಸಂಪರ್ಕ ಕಲ್ಪಿಸುವ 18 ಮೀಟರ್ ಅಗಲದ ಲಿಂಕ್ ರಸ್ತೆಗೆ 6.837 ಎಕರೆ ರಕ್ಷಣಾ ಭೂಮಿ ಒದಗಿಸುವಂತೆ ರಾಜ್ಯ ಸರಕಾರ ಕೋರಿದೆ. ಈ ರಸ್ತೆಯ ವಿನ್ಯಾಸವನ್ನು ರಕ್ಷಣಾ ಕಾರ್ಯಾಚರಣೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮೆಖ್ರಿ ಸರ್ಕಲ್ ರಸ್ತೆ ವಿಸ್ತರಣೆ: ಏಳನೆ ಪ್ರಸ್ತಾವನೆಯಾಗಿ ಬಳ್ಳಾರಿಯ ರಸ್ತೆಯ ಮೆಖ್ರಿ ಸರ್ಕಲ್‍ನಲ್ಲಿ ರಸ್ತೆ ವಿಸ್ತರಣೆಗೆ ಭೂಮಿ ನೀಡುವಂತೆ ಮನವಿ ಮಾಡಲಾಗಿದೆ. ಪ್ರಸ್ತುತ ಎರಡು ಪಥಗಳಿರುವ ರಸ್ತೆಯನ್ನು ಮೂರು ಪಥಗಳಾಗಿ ವಿಸ್ತರಿಸಲು ಡಿಜಿಕ್ಯುಎ ಮತ್ತು ಪಿಆರ್‍ಟಿಸಿ ವ್ಯಾಪ್ತಿಯ 0.775 ಎಕರೆ ಭೂಮಿ ಅಗತ್ಯವಿದೆ. ವಿಮಾನ ನಿಲ್ದಾಣದತ್ತ ಸಾಗುವ ಪ್ರಮುಖ ಮಾರ್ಗದಲ್ಲಿರುವ ಮೆಖ್ರಿ ಸರ್ಕಲ್‍ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಈ ವಿಸ್ತರಣೆ ಅಗತ್ಯವಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಬೆಂಗಳೂರಿನ ರಸ್ತೆ ಸಂಪರ್ಕ, ನಗರ ಮೂಲಸೌಕರ್ಯ ಹಾಗೂ ಯೋಜಿತ ನಗರಾಭಿವೃದ್ಧಿಗೆ ಈ ಏಳು ಪ್ರಸ್ತಾವನೆಗಳ ಇತ್ಯರ್ಥ ಪ್ರಮುಖವಾಗಿದ್ದು, ರಕ್ಷಣಾ ಸಚಿವಾಲಯವು ಎಲ್ಲ ಪ್ರಸ್ತಾವನೆಗಳಿಗೂ ಶೀಘ್ರ ಅನುಮತಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.