ಸಾಂದರ್ಭಿಕ ಚಿತ್ರ

ಬೆಂಗಳೂರು : ಪೊಲೀಸ್ ಸೇವೆಗಳ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಿ, ಅವುಗಳನ್ನು ಇನ್ನಷ್ಟು ಪರಿಣಾಮಕಾರಿ, ತ್ವರಿತ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಆರ್. ಕೆ. ದತ್ತ ನೇತೃತ್ವದಲ್ಲಿ ಸಮಗ್ರ ಪೊಲೀಸ್ ಸೇವೆಗಳ ಸುಧಾರಣಾ ಸಮಿತಿಯನ್ನು ರಚಿಸಿ, ರಾಜ್ಯ ಸರಕಾರವು ಆದೇಶ ಹೊರಡಿಸಿದೆ.

ಸಮಿತಿಗೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಆರ್. ಕೆ.ದತ್ತ ಅಧ್ಯಕ್ಷರಾಗಿದ್ದರೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ, ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಪ್ರಭು ರಾಜ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಾ. ಸಂಜೀವ್ ಎಂ. ಪಾಟೀಲ್ ಹಾಗೂ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿಯ ಮುಹಮ್ಮದ್ ಎಂ. ಸುಜೀತ ಸದಸ್ಯರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ನೇರ ಸಂವಹನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಮುದಾಯ ಆಧಾರಿತ ಪೊಲೀಸ್ ವ್ಯವಸ್ಥೆಯನ್ನು ಸಮಿತಿ ಪರಿಶೀಲಿಸಲಿದೆ. ಬೀಟ್ ಪೊಲೀಸ್ ವ್ಯವಸ್ಥೆ, ಸಮುದಾಯ ಸಭೆಗಳ ಮೂಲಕ ಸಾರ್ವಜನಿಕರೊಂದಿಗೆ ನಿರಂತರ ಸಂವಹನವನ್ನು ವೃದ್ಧಿಸುವ ಕುರಿತು ಶಿಫಾರಸುಗಳನ್ನು ಮಾಡಲಿದೆ.

ಠಾಣೆಗಳ ಸಾಮಥ್ರ್ಯವರ್ಧನೆ: ಪೊಲೀಸ್ ಠಾಣೆಗಳ ಮೂಲಸೌಕರ್ಯ ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಬಲಪಡಿಸುವುದು, ಪೊಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಜನಸಂಖ್ಯೆ ಮತ್ತು ಸೇವಾ ಅಗತ್ಯಗಳಿಗೆ ಅನುಗುಣವಾಗಿ ಪರಿಗಣಿಸುವುದು ಹಾಗೂ ಅಗತ್ಯ ಆಧಾರಿತ ವ್ಯವಸ್ಥೆ ರೂಪಿಸುವ ಕುರಿತು ಸಮಿತಿ ಗಮನಹರಿಸಲಿದೆ ಎಂದು ಆದೇಶದಲ್ಲಿ ತಿಳಿಸಿದೆ.

 

ಎಫ್‍ಐಆರ್ ದಾಖಲು, ದೂರು ಸ್ವೀಕಾರ, ಪೊಲೀಸ್ ಠಾಣೆಗಳ ಕಾರ್ಯವೈಖರಿ, ತುರ್ತು ಸೇವೆಗಳು, ಕಳೆದುಹೋದ ವಸ್ತುಗಳ ವರದಿ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳು, ಅನುಮತಿಗಳು, ಪ್ರಮಾಣಪತ್ರಗಳು ಸೇರಿದಂತೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ವಿವಿಧ ಆನ್‍ಲೈನ್ ಹಾಗೂ ನೇರ ಸೇವೆಗಳು ಲಭ್ಯವಿವೆ. ಈ ಸೇವೆಗಳ ಗುಣಮಟ್ಟ, ಲಭ್ಯತೆ, ಸಮಯಬದ್ಧತೆ ಮತ್ತು ಜನರಿಗೆ ಆಗುತ್ತಿರುವ ಅನುಕೂಲವನ್ನು ಸಮಗ್ರವಾಗಿ ಪರಿಶೀಲಿಸಿ ಮತ್ತಷ್ಟು ಸುಧಾರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಲಾಗಿದೆ.

- ಪ್ರಿಯಾಂಕ್ ಖರ್ಗೆ, ಗೃಹ ಸಚಿವ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor