ಅರಣ್ಯ ಜಮೀನು ಒತ್ತುವರಿ ಆರೋಪ: ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ನ.3: ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವುಗೊಳಿಸಿ, ಅದನ್ನು ಅರಣ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ತುಮಕೂರು ತಾಲೂಕು ಬೆಳ್ಳಾವಿ ಹೋಬಳಿ ವಕ್ಕೋಡಿ ಗ್ರಾಮದ ಮಾರಣ್ಣ ಪಾಳೆಗಾರ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ತುಮಕೂರು ಜಿಲ್ಲಾಧಿಕಾರಿ, ತುಮಕೂರು ತಹಶೀಲ್ದಾರ್, ತುಮಕೂರು ಭೂ ದಾಖಲೆಗಳ ಸಹಾಯಕ ನಿರ್ದೇಶಕ, ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ತುಮಕೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಖಾಸಗಿ ವ್ಯಕ್ತಿ ವಡ್ಡರಹಳ್ಳಿ ನಿವಾಸಿ ಜೆ.ಶ್ವೇತಾಕುಮಾರಿ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಲಾಗಿದೆ. ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಎಲ್ಲ ಪ್ರತಿವಾದಿಗಳಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತು.
ಪ್ರಕರಣವೇನು?: ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿಯ ವ್ಯಾಪ್ತಿಯ ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ 3 ಎಕರೆ 20 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿ ಜೆ. ಶ್ವೇತಕುಮಾರಿ ಒತ್ತುವರಿ ಮಾಡಿಕೊಂಡು, ಕಟ್ಟಡ ನಿರ್ಮಾಣ ಮಾಡಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ವಶಕ್ಕೆ ಪಡೆದುಕೊಳ್ಳಬೇಕು ಮತ್ತು ಅಲ್ಲಿ ನಿರ್ಮಿಸಿರುವ ಕಟ್ಟಡವನ್ನು ನೆಲಸಮ ಮಾಡಬೇಕು ಎಂದು ಕೋರಲಾಗಿದೆ.
ಅದೇ ರೀತಿ ಶ್ವೇತಕುಮಾರಿ ಅವರು ಮುತ್ತಸಂದ್ರ ಗ್ರಾಮದ ಸರ್ವೆ ನಂಬರ್ 17 ಹಾಗೂ ವಡ್ಡರಹಳ್ಳಿ ಗ್ರಾಮದ ಸರ್ವೆ ನಂಬರ್ 26ರ ಗೋಮಾಳ ಜಾಗದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.