ಎಚ್‌ಡಿಕೆ ವಿರುದ್ಧದ ಕೇತಗಾನಹಳ್ಳಿ ಸರಕಾರಿ ಜಮೀನು ಒತ್ತುವರಿ ಆರೋಪ: ಎಸ್‌ಐಟಿ ರಚನೆ ಆದೇಶಕ್ಕೆ ನೀಡಲಾದ ಮಧ್ಯಂತರ ತಡೆಗೆ ಸರಕಾರದ ಆಕ್ಷೇಪ
ಬೆಂಗಳೂರು: ರಾಮನಗರ ತಾಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿನ ಸರಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ರಾಜ್ಯ ಸರಕಾರದ ಆದೇಶಕ್ಕೆ ನೀಡಲಾಗಿರುವ ಮಧ್ಯಂತರ ತಡೆಗೆ ರಾಜ್ಯ ಸರಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಎಸ್‌ಐಟಿ ರಚನೆಗೆ ತಡೆ ನೀಡಿರುವ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ಹಾಜರಾದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು, ಈ ಪ್ರಕರಣದಲ್ಲಿ ಸರಕಾರದ ವಾದವನ್ನು ಆಲಿಸದೆ ಮಧ್ಯಂತರ ತಡೆ ನೀಡಲಾಗಿದೆ. ಎಸ್‌ಐಟಿ ರಚನೆಗೆ ತಡೆ ನೀಡಿರುವ ಬಗ್ಗೆ ನಮಗೆ ಆಕ್ಷೇಪವಿದೆ.ಈ ಆದೇಶವನ್ನು ಮರುಪರಿಶೀಲನೆಗೊಳಪಡಿಸಿ.ರಾಜ್ಯ ಸರಕಾರದ ವಾದವನ್ನು ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 195ರ ಅನುಸಾರ ರಾಜ್ಯ ಸರಕಾರಕ್ಕೆ ಎಸ್‌ಐಟಿ ರಚಿಸುವ ಅಧಿಕಾರವಿದೆ. ಅಷ್ಟಕ್ಕೂ ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿಯೇ ಈ ಎಸ್‌ಐಟಿ ರಚಿಸಲಾಗಿದೆ ಎಂದು ವಿವರಿಸಿದ ಅವರು, ಮಧ್ಯಂತರ ತಡೆ ಆದೇಶ ತೆರವುಗೊಳಿಸುವಂತೆ ಕೋರಿದ ಮತ್ತು ರಿಟ್ ಅರ್ಜಿಗೆ ಸಂಬಂಧಿಸಿದ ಆಕ್ಷೇಪಣೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು’ ಎಂದು ತಿಳಿಸಿ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿತು.