ಆಶಾ ಕಾರ್ಯಕರ್ತೆಯರ ನಿಶ್ಚಿತ ಗೌರವಧನ ಹೆಚ್ಚಿಸಲು ಆಗ್ರಹಿಸಿ ಆ.12ರಿಂದ ಅಹೋರಾತ್ರಿ ಧರಣಿ : ಡಿ.ನಾಗಲಕ್ಷ್ಮೀ
PC : PTI
ಬೆಂಗಳೂರು : ಆಶಾ ಕಾರ್ಯಕರ್ತೆಯರ ನಿಶ್ಚಿತ ಗೌರವಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಆ.12 ರಿಂದ 14ರ ವರೆಗೆ ನಗರದ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಹೇಳಿದ್ದಾರೆ.
ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆ ಈಡೇರಿಕೆಗಾಗಿ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. 7 ತಿಂಗಳ ಹಿಂದೆ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ 10 ಸಾವಿರ ರೂ.ಗಳ ಗೌರವ ಧನ ನೀಡುವುದಾಗಿ ಭರವಸೆ ನೀಡಿದ್ದರೂ, ಅದು ಇಂದಿಗೂ ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದಿನ ಬಜೆಟ್‍ನಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಗೌರವಧನ ಹೆಚ್ಚಿಸುವುದಾಗಿ ಸರಕಾರ ತಿಳಿಸಿತ್ತು. ಆದರೆ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆರಿಗೆ ಗೌರವಧನ ಹೆಚ್ಚಿಸಿ, ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿಸಲಿಲ್ಲ. 60 ವರ್ಷ ಪೂರೈಸಿದ ಆಶಾ ಕಾರ್ಯಕರ್ತರನ್ನು ದಿಢೀರನೆ ಸೇವೆಯಿಂದ ತೆಗೆದುಹಾಕಿ, ಯಾವುದೇ ಪರಿಹಾರ ನೀಡದೆ ಅವರನ್ನು ಬೀದಿಗೆ ತಳ್ಳುವ ಕಾರ್ಯ ನಡೆಯುತ್ತಿದೆ. ಆಶಾಗಳ ಕೆಲಸದ ಮೌಲ್ಯಮಾಪನವನ್ನು ವಿವಿಧ ರೀತಿಯಲ್ಲಿ ನಡೆಸುತ್ತಿರುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಜೆಟ್‍ನಲ್ಲಿ ಘೋಷಿಸಿದಂತೆ ಮಾಸಿಕ ಕನಿಷ್ಠ 10 ಸಾವಿರ ರೂ. ಗೌರವಧನವನ್ನು ಎಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಕೂಡಲೇ ಜಾರಿಗೊಳಿಸಬೇಕು. ಜನಸಂಖ್ಯೆ ಮಿತಿಯನ್ನು ಹೆಚ್ಚಿಸುವ ನೆಪದಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ನಗರ ಆಶಾಗಳಿಗೆ 2 ಸಾವಿರ ರೂ. ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಜೂನ್-ಜುಲೈನಲ್ಲಿ ಕೇಂದ್ರ ಸರಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿಯೂ ಜಾರಿಗೊಳಿಸಬೇಕು. ಬಿಸಿಯೂಟ ಕಾರ್ಯಕರ್ತೆರಿಗೆ ಗೌರವಧನ ಹೆಚ್ಚಿಸಿದಂತೆ ಆಶಾಗಳಿಗೂ 1 ಸಾವಿರ ರೂ. ಗೌರವಧನ ಹೆಚ್ಚಿಸಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು ಎಂದು ನಾಗಲಕ್ಷ್ಮೀ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ಸಿ.ರಮಾ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪಾಧ್ಯಕ್ಷೆ ನಾಗರತ್ನ, ಕಾರ್ಯಕರ್ತೆಯರಾದ ಪದ್ಮಾ, ರೂಪಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.