ವಿಜಯೇಂದ್ರ ರಾಜ್ಯಾಧ್ಯಕ್ಷನನಾಗಿ ಮುಂದುವರಿಸಿದರೆ ಹೊಸ ಪಕ್ಷ ಕಟ್ಟುತ್ತೇವೆ : ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು : ‘ಬಿ.ವೈ.ವಿಜಯೇಂದ್ರನನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದರೆ, ನಾವು ಹೊಸ ಪಕ್ಷ ಕಟ್ಟುವುದು ನಿಶ್ಚಿತ’ ಎಂದು ವಿಜಯಪುರದ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಪ್ರಕಟಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರತಿಪಕ್ಷ ಬಿಜೆಪಿಯಲ್ಲಿ ಭಾರೀ ಒಗ್ಗಟ್ಟಿತ್ತು. ಆದರೆ, ಇದೀಗ ಇಲ್ಲ. ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನಾಗಿ ಬಿಜೆಪಿ ವರಿಷ್ಠರು ಮುಂದುವರೆಸಿದರೆ ಇರುವ ಒಗ್ಗಟ್ಟು ಹೊಡೆದು ಹೋಗುತ್ತೆ. ಸದ್ಯ ಸಂಸದ ರಾಘವೇಂದ್ರ ಅವರನ್ನು ಬಿಟ್ಟು ಯಾವ ಲೋಕಸಭಾ ಸದಸ್ಯರು ವಿಜಯೇಂದ್ರರನ್ನು ಮುಂದುವರೆಸಲು ಬೆಂಬಲ ನೀಡಿಲ್ಲ ಎಂದು ಟೀಕಿಸಿದರು.
ಅಪ್ಪ-ಮಕ್ಕಳ ವೈಫಲ್ಯ: ರಾಜ್ಯದಲ್ಲಿ ಅಪ್ಪ-ಮಕ್ಕಳದು ಏನು ಇಲ್ಲ ಎಂದು ಬಿಜೆಪಿ ಹೈಕಮಾಂಡ್‍ಗೆ ಗೊತ್ತಾಗಿದೆ. ಹೀಗಾಗಿ, ಎಲ್ಲ ರಾಜ್ಯದ ಅಧ್ಯಕ್ಷರ ಘೋಷಣೆ ಮಾಡಿದರೂ, ಕರ್ನಾಟಕದ್ದು ಇನ್ನೂ ಘೋಷಣೆ ಮಾಡಿಲ್ಲ. ವಿಜಯೇಂದ್ರನಿಗೆ ಜನಪ್ರಿಯತೆ ಇದ್ದರೆ, ಸಂಘಟನೆ ಮಾಡಿದ್ದರೆ ಇಷ್ಟೊತ್ತಿಗೆ ರಾಜ್ಯಾಧ್ಯಕ್ಷನಾಗಿ ಘೋಷಣೆ ಮಾಡಬೇಕಿತ್ತು. ಆದರೆ, ಅವರ ವೈಫಲ್ಯ ಹೈಕಮಾಂಡ್‍ಗೆ ಗೊತ್ತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಮೋದಿಗೆ ಬೆಂಬಲ: ನಾವು ಎರಡೂ ಹಾದಿಯನ್ನು ತೆರೆದಿಟ್ಟಿದ್ದೇವೆ. ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಹೈಕಮಾಂಡ್ ಆಯ್ಕೆ ಮಾಡಿದರೆ, ನಮ್ಮ ಹೊಸ ಪಕ್ಷ ಆರಂಭ ಸತ್ಯ. ವಿಧಾನಸಭಾ ಚುನಾವಣೆಗೆ ನಮ್ಮ ಅಭ್ಯರ್ಥಿ ಹಾಕುವುದು ಶತಸಿದ್ಧ. ಮುಂದಿನ ಸರಕಾರ ನಮ್ಮದು ಬರಲಿದ್ದು, ಮುಂಬರಲಿರುವ ಲೋಕಸಭಾ ಚುನಾವಣೆಗೆ ನಾವು ಮೋದಿಯನ್ನು ಬೆಂಬಲಿಸಲಿದ್ದೇವೆ ಎಂದು ಯತ್ನಾಳ್ ಪ್ರಕಟಿಸಿದರು.
ಯಶವಂತಪುರ ಕ್ಷೇತ್ರಕ್ಕೆ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ್ದು, ಇದರಿಂದ ಆ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್‍ಗೆ ಅನುಕೂಲ ಆಗಲಿ. ಅಭ್ಯರ್ಥಿ ಘೋಷಣೆ ಮಾಡಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಭಿನ್ನಮತಕ್ಕೆ ಕಾರಣವಾಗಿದೆ ಎಂದು ಯತ್ನಾಳ್ ಇದೇ ವೇಳೆ ವಾಗ್ದಾಳಿ ನಡೆಸಿದರು.