×
Ad

ʼಗ್ಯಾರೆಂಟಿʼಗೆ ಹಣ ಹೊಂದಿಸಲಾಗದೇ ಸಿಎಂರಿಂದ ಕೇಂದ್ರದ ವಿರುದ್ದ ರಾಜಕೀಯ ಆರೋಪ : ಬೊಮ್ಮಾಯಿ

Update: 2025-06-14 13:17 IST

ಬಸವರಾಜ ಬೊಮ್ಮಾಯಿ

ಬೆಂಗಳೂರು : 14 ನೇ ಹಣಕಾಸು ಆಯೋಗಕ್ಕೆ ಹೋಲಿಕೆ ಮಾಡಿದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ 1 ಲಕ್ಷ ಕೋಟಿ ರೂ. ಗೂ ಹೆಚ್ಚು ಹಣ ಬರುತ್ತದೆ. ಗ್ಯಾರೆಂಟಿ ಯೋಜನೆಗೆ ಹಣ ಹೊಂದಿಸಲಾಗದೇ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರದ ವಿರುದ್ದ ರಾಜಕೀಯವಾಗಿ ಮಾತನಾಡುತ್ತಾರೆ‌ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಸುದ್ದಿಗಾರೊಂದಿಗೆ ಮಾತನಾಡದಿ ಅವರು, ಸಿಎಂ ಸಿದ್ದರಾಮಯ್ಯ ಅವರು, ಹೊಸದೇನು ಹೇಳಿಲ್ಲ. ಈಗಾಗಲೇ ಹಲವಾರು ಬಾರಿ ಸುಳ್ಳು ಹೇಳಿದ್ದಾರೆ. ಈಗ ಅದನ್ನೇ ಮತ್ತೆ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದ ಅನುದಾನ ಶೇ.32ರಿಂದ ಶೇ.42ಕ್ಕೆ ಏರಿಸಿದ್ದರು. ಅವರು ಶೇ.10 ಹೆಚ್ಚಳ ಮಾಡಿದ್ದಾರೆ. ಅದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದು ಮರೆ ಮಾಚುತ್ತಾರೆ. ಶೇ40 ರಿಂದ 50ಕ್ಕೆ ಹೆಚ್ಚಳ ಮಾಡಬೇಕೆನ್ನುವುದು ನಮ್ಮೆಲ್ಲರ ಬೇಡಿಕೆಯಾಗಿದೆ. 14 ನೇ ಹಣಕಾಸು ಆಯೋಗ ಸಭೆ ನಡೆಸಿದ ಸಂದರ್ಭದಲ್ಲಿ ಐದು ಜನ ಕಾಂಗ್ರೆಸ್ ಸಚಿವರಿದ್ದರು. ಆಗ ರಾಜ್ಯದ ಪರವಾಗಿ ಸರಿಯಾಗಿ ವಾದ ಮಾಡದೇ ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ರಾಜ್ಯಕ್ಕೆ ಕಾಂಗ್ರೆಸ್ ನಿಂದಲೇ ಅನ್ಯಾಯವಾಗಿದೆ ಎಂದು ಆರೋಪಿಸಿದರು.

14ನೇ ಹಣಕಾಸು ಆಯೋಗಕ್ಕೆ ಹೋಲಿಕೆ ಮಾಡಿದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ 1 ಲಕ್ಷ ಕೋಟಿ ರೂ. ಹೆಚ್ಚಿಗೆ ಬರುತ್ತದೆ. ಈಗಾಗಲೇ 14 ನೇ ಹಣಕಾಸು ಆಯೋಗದಲ್ಲಿ ಬಂದಷ್ಟು ಹಣ ರಾಜ್ಯಕ್ಕೆ ಬಂದಿದೆ. ಇನ್ನು ಎರಡು ವರ್ಷ ಬರುತ್ತದೆ. ಗ್ಯಾರೆಂಟಿ ಯೋಜನೆಗೆ ಹಣ ಹೊಂದಿಸಲಾಗದೇ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರದ ವಿರುದ್ದ ರಾಜಕೀಯವಾಗಿ ಮಾತನಾಡುತ್ತಾರೆ‌. ರಾಜ್ಯದ ರೈಲ್ವೆ ಯೋಜನೆಗೆ ಯುಪಿಎ ಅವಧಿಯಲ್ಲಿ 700 ಕೋಟಿ ರೂ. ಬಂದಿತ್ತು. ಈ ವರ್ಷ ಕೇಂದ್ರ ಸರಕಾರ 7700 ಕೋಟಿ ರೂ. ಕೊಟ್ಟಿದೆ. ಅದಕ್ಕೆ ಮ್ಯಾಚಿಂಗ್ ಗ್ರ್ಯಾಂಟ್ ಕೊಡಲು ರಾಜ್ಯ ಸರಕಾರಕ್ಕೆ ಆಗುತ್ತಿಲ್ಲ. ಆರೋಗ್ಯ, ಗ್ರಾಮಿಣಾಭಿವೃದ್ದಿ, ರಸ್ತೆ ಸೇರಿದಂತೆ ಹಲವಾರು ಯೋಜನೆಗಳಿಗೂ ಕೇಂದ್ರ ಸರಕಾರ ಅನುದಾನ ನೀಡುತ್ತಿದೆ‌. ಅದನ್ನು ರಾಜ್ಯ ಸರಕಾರ ಹೇಳುವುದಿಲ್ಲ ಎಂದು ಹೇಳಿದರು.

ಜಾತಿ ಸಮೀಕ್ಷೆ ಅಧಿಕಾರವಿಲ್ಲ :

ಜಾತಿ ಸಮೀಕ್ಷೆ ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ಮುಖ್ಯಮಂತ್ರಿಗಳು ಸುಮ್ಮನೆ ಹಿಂದುಳಿದ ವರ್ಗದ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಹತ್ತು ವರ್ಷದಿಂದ ಇವರೇ ಸಿಎಂ ಇದ್ದರು, ಆಗ ಯಾಕೆ ಮಾಡಲಿಲ್ಲ. ಜಾತಿ ಸಮೀಕ್ಷೆ ವಿಚಾರದಲ್ಲಿ ಸಿಎಂ ಬಹಳ ಸಂಕಷ್ಟಕ್ಕೆ ಸಿಲುಕಿದ್ದರು. ಹೈಕಮಾಂಡ್ ಅದರಿಂದ ಇವರನ್ನು ರಕ್ಷಿಸಿದೆ. ಆದರೆ, ಕೇಂದ್ರ ಸರಕಾರವೇ ಮಾಡುವ ಜಾತಿ ಸಮೀಕ್ಷೆ ಅಂತಿಮ ಎಂದು ಹೇಳಿದರು.

ಯುದ್ದ ನಿಲ್ಲಿಸಲು ಶ್ರಮಿಸಬೇಕು :

ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು ಆಘಾತಕಾರಿ ವಿಚಾರ, ಈ ಬಗ್ಗೆ ಅಮೆರಿಕಾ ಕೂಡ ತುರ್ತು ಸಭೆ ನಡೆಸಿದೆ. ಒಂದೆಡೆ ರಷ್ಯಾ ಉಕ್ರೇನ್ ಯುದ್ದ, ಇದು ವಿಶ್ವದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ವಿಶ್ವದ ಎಲ್ಲ ನಾಯಕರು ಯುದ್ದ ನಿಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News