×
Ad

ʼಅಕ್ರಮ ಗಣಿ ಪ್ರಕರಣʼ ಎಚ್.ಕೆ.ಪಾಟೀಲ್‌ರ ಪತ್ರಕ್ಕೆ ಸಿಎಂ ಸ್ಪಂದನೆ ಏನು : ಬೊಮ್ಮಾಯಿ

Update: 2025-06-22 12:16 IST

ಬಸವರಾಜ ಬೊಮ್ಮಾಯಿ

ಗದಗ : ಅಕ್ರಮ ಗಣಿ ಪ್ರಕರಣಗಳ ಕುರಿತು ಸರಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ್‌ ಅವರು ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಸ್ಪಂದಿಸುತ್ತಾರೆ ಎನ್ನುವುದು ರಾಜ್ಯದ ಜನರ ಪ್ರಶ್ನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್.ಕೆ.ಪಾಟೀಲ್‌ ಅವರು ಗಣಿಯಲ್ಲಿ ನೋಂದಾಗಿರುವ ಕೇಸ್‌ಗಳ ಬಗ್ಗೆ ಶೇ.90 ಕೇಸ್‌ಗಳು ಇತ್ಯರ್ಥವಾಗಿಲ್ಲ ಎಂದು ಅತ್ಯಂತ ಮಹತ್ವದ ವಿಚಾರ ಹೊರ ತಂದಿದ್ದಾರೆ. ಈಗಲೂ ಅವರದೇ ಸರಕಾರ ಇದೆ. ಅವರದೇ ಸಚಿವ ಸಂಪುಟದ ಸದಸ್ಯರು ಎತ್ತಿರುವ ಪ್ರಕರಣಕ್ಕೆ ಮುಖ್ಯಮಂತ್ರಿಗಳು ಹೇಗೆ ಸ್ಪಂದಿಸುತ್ತಾರೆ ಎನ್ನುವುದು ರಾಜ್ಯದ ಜನರ ಪ್ರಶ್ನೆಯಾಗಿದೆ ಎಂದು ಹೇಳಿದರು.

ಎಚ್.ಕೆ.ಪಾಟೀಲ್‌ರು ವಿಶೇಷ ನ್ಯಾಯಾಲಯ ಮಾಡಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಲವಾರು ಕೇಸುಗಳು ನೋಂದಣಿಯಾಗಿ ಎಸ್‌ಐಟಿ ರಚನೆ ಆಗಿವೆ. ಸಿಬಿಐ ತನಿಖೆ ನಡೆಯುತ್ತಿವೆ. ಎಸ್‌ಐಟಿ ಮುಖ್ಯಸ್ಥರ ಮೇಲೆ ಹಲವಾರು ಆರೋಪಗಳು ಕೇಳಿ ಬಂದಿವೆ. ಎಚ್.ಕೆ.ಪಾಟೀಲ್‌ರು 2017-18ರ ಪೂರ್ವದ ಪ್ರಕರಣಗಳ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ಇಡೀಡಿ ದೇಶದಲ್ಲಿ ಗಣಿಗಳನ್ನು ಇ ಹರಾಜು ಮಾಡಬೇಕೆಂದು ಕೇಂದ್ರ ಸರಕಾರ ಕಾನೂನು ಜಾರಿ ಮಾಡಿತು. ಕೇಂದ್ರ ಸರಕಾರ ಕಾನೂನು ಜಾರಿ ಮಾಡುವ ಹಿಂದಿನ ದಿನ ಕರ್ನಾಟಕ ಸರಕಾರ ತನಗೆ ಬೇಕಾದವರಿಗೆ ಹಲವಾರು ಗಣಿ ಗುತ್ತಿಗೆ ನವೀಕರಣ ಮಾಡಿತ್ತು. ಅವುಗಳ ಬಗ್ಗೆಯೂ ತನಿಖೆ ಮಾಡಲು ಎಚ್.ಕೆ. ಪಾಟೇಲ್‌ರು ಒಪ್ಪುತ್ತಾರಾ ಎಂದು ಪಶ್ನಿಸಿದರು.

ಇದೇ ವೇಳೆ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಅವರು, ಸರಕಾರಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರವಾಗುತ್ತಿರುವ ಬಗ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿ.ಆರ್.ಪಾಟೀಲ್ ಹಲವಾರು ವಿಚಾರ ಎತ್ತುತ್ತಾರೆ. ಅವರ ಮಾತಿಗೆ ಕಾಂಗ್ರೆಸ್‌ನವರು ಯಾರೂ ಮರ್ಯಾದೆ ಕೊಡುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಮಾತನಾಡುವವರಿಗೆ ಕಾಂಗ್ರೆಸ್‌ನಲ್ಲಿ ಮರ್ಯಾದೆ ಇಲ್ಲ ಎನ್ನುವುದು ಬಹಳ ಸ್ಪಷ್ಟವಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News