×
Ad

‘ಮತಗಳ್ಳತನ’ ದಾಖಲೆ ಇದ್ದರೆ ಬಿಡುಗಡೆ ಮಾಡಲಿ : ಬಸವರಾಜ ಬೊಮ್ಮಾಯಿ ಆಗ್ರಹ

Update: 2025-08-03 18:46 IST

ಬಸವರಾಜ ಬೊಮ್ಮಾಯಿ

ಬೆಂಗಳೂರು : ‘ಮತಗಳ್ಳತನದ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿ ಸಾಂವಿಧಾನಿಕ ಸಂಸ್ಥೆ ಮೇಲೆ ಆರೋಪ ಮಾಡುವುದು ಸರಿಯಲ್ಲ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಆಟಂ ಬಾಂಬ್ ಇದ್ದರೆ ಬಿಡಿ, ನಿಮಲ್ಲೆ ಇದ್ದರೆ ಅಲ್ಲೇ ಸ್ಪೋಟಗೊಳ್ಳಬಹುದು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಶಯ ಬರುವ ರೀತಿಯಲ್ಲಿ ನಡುಕೊಳ್ಳುತ್ತಿದೆ. ಮೊದಲು ಇವಿಎಂ ಮೇಲೆ, ಈಗ ಚುನಾವಣಾ ಆಯೋಗದ ಮೇಲೆ ಅನುಮಾನ ವ್ಯಕ್ತಪಡೆಸುತ್ತಿದ್ದಾರೆ. ಇವಿಎಂ ಹ್ಯಾಕ್ ಗೊಂದಲ ನಿವಾರಣೆಗೆ ಪ್ರಾತ್ಯಕ್ಷಿಕೆಗೆ ಕರೆದಾಗ ಕಾಂಗ್ರೆಸ್‍ನವರು ಬಂದಿಲ್ಲ ಎಂದು ಟೀಕಿಸಿದರು.

ರಾಜ್ಯ ಸರಕಾರದ ಅಧಿಕಾರಿಗಳೇ ಚುನಾವಣೆ ಮುಖ್ಯಸ್ಥರು. ರಾಜಕೀಯ ಪಕ್ಷಗಳಿಗೂ ಬೂತ್‍ಗಳಲ್ಲಿ ವ್ಯಕ್ತಿ ನೇಮಕಕ್ಕೆ ಅವಕಾಶ ಇದೆ. ಇದರಲ್ಲಿ ಚುನಾವಣಾ ಆಯೋಗ ಭಾಗಿ ಆಗಿದೆ ಅನ್ನುವುದು ಸರಿಯಲ್ಲ. ಮತದಾರರ ಹೆಸರು ಡಿಲೀಟ್ ಅಥವಾ ಸೇರ್ಪಡೆ ಆಗಿರುವ ಬಗ್ಗೆ ಅಂದೇ ಕೇಳಬೇಕಿತ್ತು ಎಂದು ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಮಂಜುನಾಥ್ ಚುನಾವಣೆ ವೇಳೆ ರಾಜಕೀಯಕ್ಕೆ ಬಂದವರು. ಚುನಾವಣೆ ಆಯೋಗದ ಮೇಲೆ ಆರೋಪ ಸರಿಯಲ್ಲ. ಅಧಿಕಾರಿಗಳ ಹಸ್ತಕ್ಷೇಪ ಇದ್ದರೆ ಸಾಕ್ಷಿ ಕೊಡಿ, ಚುನಾವಣಾ ಆಯೋಗದ ವಿಶ್ವಾಸರ್ಹತೆಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಅವರು ಆಕ್ಷೇಪಿಸಿದರು.

ಆಯೋಗವು ಏನಾಗಿದೆ ಹೇಳಿ ಎಂದು ಕೇಳಿದೆ. ಆದರೆ, ಕಾಂಗ್ರೆಸ್ ಲಿಖಿತ ದೂರನ್ನೂ ಕೊಟ್ಟಿಲ್ಲ. ಇವಿಎಂ ಮೇಲಿನ ಆರೋಪಕ್ಕೆ ಕೋರ್ಟ್ ಉತ್ತರ ಕೊಟ್ಟಿದೆ. ಮೋದಿ ಮೂರನೆ ಬಾರಿ ಪ್ರಧಾನಿ ಆಗಿದ್ದು, ಆ ಆಘಾತ ಕಾಂಗ್ರೆಸ್‍ಗೆ ಆಗಿದೆ. ಚುನಾವಣಾ ಆಯೋಗವೇ ಆರೋಪಿ ಎಂದು ಹೇಳುವ ಯತ್ನದಿಂದ ಸಂವಿಧಾನಕ್ಕೆ ಧಕ್ಕೆ ಯಾಗುವ ಸಾಧ್ಯತೆ ಇದೆ. ಆ ಕಾರಣಕ್ಕಾಗಿ ಬಿಜೆಪಿ ವಿರೋಧಿಸುತ್ತಿದೆ ಎಂದು ಹೇಳಿದರು.

ಒಳ ಮೀಸಲಾತಿ ಜಾರಿ ನಂಬಿಕೆ ಇಲ್ಲ: ಒಳಮೀಸಲಾತಿ ವಿಚಾರದಲ್ಲಿ ಇವತ್ತಿಗೂ ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರಾಗಿಲ್ಲ. ಒಳಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿ ಆಗಬೇಕು ಅನ್ನುತ್ತಿದ್ದರು. ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ಸುಮ್ಮನಾಗಿದ್ದಾರೆ 2013ರಿಂದಲೂ ಎಸ್‍ಸಿ ಸಮುದಾಯಗಳಿಗೆ ಕಾಂಗ್ರೆಸ್ ಮೂಗಿಗೆ ತುಪ್ಪ ಸವರಿಕೊಂಡೇ ಬಂದಿದೆ. ಆದರೆ, ಈ ಸರಕಾರ ವರದಿ ಜಾರಿ ಮಾಡುತ್ತದೆ ಅನ್ನುವ ವಿಶ್ವಾಸ ಇಲ್ಲ ಎಂದರು.

‘ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದ್ದು, ಎಲ್ಲವೂ ಕಾನೂನು ಪ್ರಕಾರ ಆಗಿದೆ. ಇದರಲ್ಲಿ ಮಾತನಾಡುವಂತದ್ದು ಏನು ಇಲ್ಲ. ಇದರಿಂದ ಜೆಡಿಎಸ್-ಬಿಜೆಪಿ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’

-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News