×
Ad

45 ವರ್ಷಗಳ ರಾಜಕೀಯ ಸೇವೆ: ಮೇಲ್ಮನೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿಗೆ ಶ್ಲಾಘನೆ

Update: 2025-08-19 19:34 IST

ಬೆಂಗಳೂರು, ಆ.19 : ಸುಮಾರು ನಲವತ್ತೈದು ವರ್ಷಗಳ ಕಾಲ ಯಾವುದೇ ಕಪ್ಪುಚುಕ್ಕೆ ಇಲ್ಲದೇ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿರುವ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ರಾಜಕೀಯ ಸೇವೆಯನ್ನು ಮಂಗಳವಾರ ಮೇಲ್ಮನೆಯಲ್ಲಿ ಸಚಿವರು ಹಾಗೂ ಸದಸ್ಯರು ಶ್ಲಾಘಿಸಿ ಅಭಿನಂಧಿಸಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್, 1980ರಲ್ಲಿ ವಿಧಾನ ಪರಿಷತ್ತಿನ ಶಿಕ್ಷಣ ಕ್ಷೇತ್ರದಿಂದ ಬಸವರಾಜ ಹೊರಟ್ಟಿ ಅವರು ಆಯ್ಕೆಯಾಗಿ ಅಲ್ಲಿಂದ ಇಲ್ಲಿಯವರೆಗೂ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಸೋಲನ್ನು ಕಾಣದೆ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.

ಸಭಾಪತಿಗಳಾಗಿ ತಾವು ಯಾವುದೇ ಪಕ್ಷ ಭೇದ ಮರೆತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ರೀತಿ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ. ತಮ್ಮ ಕುರ್ಚಿಗೆ ಅಪಮಾನವಾದಾಗ ಸೂಕ್ತ ರೀತಿಯ ತೀರ್ಮಾನ ತೆಗೆದುಕೊಂಡು ಕ್ರಮ ವಹಿಸಬೇಕಾಗಿತ್ತು. ಆದರೆ ತಾವು ಆ ಕೆಲಸ ಮಾಡಲಿಲ್ಲ. ತಾವು ಕಿರಿಯರಿಗೆ ಮಾರ್ಗದರ್ಶಕರಾಗಿದ್ದೀರಿ. ತಮ್ಮ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಹೊರಟ್ಟಿ ಅವರು ತಮ್ಮ ಸುದೀರ್ಘ ಸೇವೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 8 ಬಾರಿ ಆಯ್ಕೆಯಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿಧಾನ ಪರಿಷತ್ ಸಭಾಪತಿಗಳಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ತಮ್ಮ ಸೇವಾಧಿಯಲ್ಲಿ 17 ಜನ ಮುಖ್ಯಮಂತ್ರಿಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಅಪಾರಾದ ಕೊಡುಗೆ ಯಾರಿಂದಲೂ ಮರೆಯಲು ಸಾಧ್ಯವಿಲ್ಲ ಎಂದರು.

ಸಭಾಪತಿ ಹೊರಟ್ಟಿ ಅವರು ಶಾಲೆ ತೆರೆಯುವ ಸಲುವಾಗಿ ತಮ್ಮ ಊರಿನಲ್ಲಿ ಸ್ವಂತ ಜಾಗವನ್ನು ದಾನ ಮಾಡಿ, ಶಾಲೆಯನ್ನು ನಿರ್ಮಿಸಿ ಆರ್ಥಿಕತೆಯಿಂದ ಹಿಂದುಳಿದ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ ಎಂದು ಮಂಜುನಾಥ್ ಭಂಡಾರಿ ಹೇಳಿದರು.

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜಕೀಯ ಜೀವನದಲ್ಲಿ 45 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮುನ್ನಡೆಯುತ್ತಿದ್ದೀರಿ. ತಮ್ಮ ಜೀವನದ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ಪಿ.ಎಚ್.ಡಿ ಮಾಡಬೇಕಾಗಿದೆ. ಜನಪರ ಸೇವೆ ಮಾಡುತ್ತಾ ಜನರ ಮನ ಗೆದ್ದಿದ್ದೀರಿ. ಒಂದು ವಿಪರ್ಯಾಸ ಎಂದರೆ ತಮ್ಮದು 45 ವರ್ಷಗಳ ಸುದೀರ್ಘ ಸೇವೆ ಆಯಿತು ಆದರೆ ನಾನು ಸದನಕ್ಕೆ ಬರಬೇಕಾದಲ್ಲಿ 45 ವರ್ಷ ಆಯಿತು ಎಂದರು.

ಅದೇ ರೀತಿ ವಿಧಾನ ಪರಿಷತ್ತಿನ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರ 45 ವರ್ಷಗಳ ಸುದೀರ್ಘ ಸೇವೆಯನ್ನು ಶ್ಲಾಘಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News