16ನೇ ಹಣಕಾಸು ಆಯೋಗಕ್ಕೆ ಕರ್ನಾಟಕದ ಬೇಡಿಕೆ ಮಂಡನೆ | ‘ನಮ್ಮ ತೆರಿಗೆ ನಮ್ಮ ಹಕ್ಕು’ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ ಸಿಎಂ ಸಿದ್ದರಾಮಯ್ಯ
‘ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ, ಸಮಾನ ಹಂಚಿಕೆ-ಸದೃಢ ಒಕ್ಕೂಟ’
ಬೆಂಗಳೂರು : ‘ರಾಜ್ಯದ ಒಟ್ಟಾರೆ ಆಯವ್ಯಯದಲ್ಲಿ ಇಡೀ ದೇಶದಲ್ಲಿಯೇ ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು-ಅನುದಾನ ಪಡೆಯುವ ರಾಜ್ಯವೂ ಕರ್ನಾಟಕವೇ ಆಗಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ನಮಗೆ 14ನೇ ಹಣಕಾಸು ಆಯೋಗವು ನೀಡಿದ್ದ ಶೇ.4.71ರಷ್ಟು ಪಾಲನ್ನು ಕೊಟ್ಟರೆ ಮಾತ್ರ ನಾವು ನಿಟ್ಟುಸಿರು ಬಿಡುವಂತಾಗುತ್ತದೆ. ಅದಕ್ಕಿಂತ ಹೆಚ್ಚು ಕೊಟ್ಟರೆ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ ಬೇಡಿಕೆ ಮಂಡಿಸಿದ್ದು, ‘ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ, ಸಮಾನ ಹಂಚಿಕೆ-ಸದೃಢ ಒಕ್ಕೂಟ’ ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಆರಂಭಿಸಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಪ್ರಧಾನಿ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಒತ್ತಾಯ ಮಾಡುತ್ತಿದ್ದಂತೆಯೇ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿರುವ ಶೇ.41ರಷ್ಟು ಹಂಚಿಕೆಯನ್ನು ಶೇ.50ಕ್ಕೆ ಏರಿಕೆ ಮಾಡಬೇಕು. ಸೆಸ್ ಮತ್ತು ಸರ್ ಚಾರ್ಜ್‍ಗಳನ್ನು ಕೇಂದ್ರದ ಆದಾಯದ ಶೇ.5ಕ್ಕೆ ಮಾತ್ರ ಸೀಮಿತಗೊಳಿಸಿ, ಉಳಿಕೆ ಮೊತ್ತವನ್ನು ರಾಜ್ಯಗಳಿಗೆ ಹಂಚಬೇಕು’ ಎಂದು ಒತ್ತಾಯಿಸಿದ್ದಾರೆ.
‘ಮಲೆನಾಡು, ಕರಾವಳಿ ಹಾಗೂ ಪಶ್ಚಿಮಘಟ್ಟಗಳು ಪರಿಸರ ಸೂಕ್ಷ್ಮ ವಲಯಗಳಾಗಿವೆ. ಅವು ಇಡೀ ಭಾರತದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ. ಅಲ್ಲಿನ ಕೃಷಿಕರ ಬದುಕು ಸಂಕಷ್ಟದಲ್ಲಿದೆ. ಅದಕ್ಕಾಗಿ ವಿಶೇಷ ಅನುದಾನಗಳನ್ನು ಒದಗಿಸಬೇಕು. ಅಲ್ಲದೆ, ರಾಜಸ್ಥಾನದ ನಂತರ ಅತಿಹೆಚ್ಚು ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಒಣಭೂಮಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅದಕ್ಕೆ ಅನುದಾನ ಕೊಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
‘ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕಕ್ಕೆ 5 ವರ್ಷಗಳಲ್ಲಿ 25ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇದರ ಜೊತೆಗೆ ಕೇಂದ್ರ ಸರಕಾರವೂ ಅಷ್ಟೇ ಮೊತ್ತವನ್ನು ಮ್ಯಾಚಿಂಗ್ ಗ್ರ್ಯಾಂಟ್ ನೀಡಬೇಕು ಹಾಗೂ ಆ ಭಾಗದ ಪರಿಸರ ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ 10 ಸಾವಿರ ಕೋಟಿ ರೂ.ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಿದ್ದರಾಮಯ್ಯ ಕೋರಿದ್ದಾರೆ.
‘ವಿಕೇಂದ್ರೀಕರಣದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನು ಪ್ರೋತ್ಸಾಹಿಸಲು ಪಂಚಾಯತ್ ಅಧಿಕಾರ ಹಂಚಿಕೆ ಸೂಚ್ಯಂಕವನ್ನು ಅಳವಡಿಸಿಕೊಳ್ಳಬೇಕು. ಹಿಂದಿನ ಹಣಕಾಸು ಆಯೋಗಗಳು ಜನಸಂಖ್ಯೆಗೆ ಶೇ.90 ಹಾಗೂ ವಿಸ್ತೀರ್ಣಕ್ಕೆ ಶೇ.10ರಷ್ಟು ಮಾನದಂಡಗಳನ್ನು ಅಳವಡಿಸಿಕೊಂಡ ಕಾರಣ, ವಿಕೇಂದ್ರೀಕರಣ ಸಾಧಿಸಿದ ರಾಜ್ಯಗಳಿಗೆ ಅನ್ಯಾಯವಾಯಿತು. ಆದ್ದರಿಂದ ಜನಸಂಖ್ಯೆಗೆ ಶೇ.60, ಭೌಗೋಳಿಕ ವಿಸ್ತೀರ್ಣಕ್ಕೆ ಶೇ.20 ಮತ್ತು ಅಧಿಕಾರ ಹಂಚಿಕೆ ಸೂಚ್ಯಂಕಕ್ಕೆ ಶೇ.20ರಷ್ಟು ಮಾನದಂಡಗಳನ್ನು ನಿಗದಿಪಡಿಸಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
15ನೆ ಹಣಕಾಸು ಆಯೋಗವು ಜನಸಂಖ್ಯೆಯನ್ನು 1971ರ ಬದಲಾಗಿ 2011ಅನ್ನು ಆಧಾರವಾಗಿರಿಸಿಕೊಂಡ ಕಾರಣದಿಂದಲೂ ನಮಗೆ ತೀವ್ರ ಅನ್ಯಾಯವಾಗಿದೆ. ಜನಸಂಖ್ಯಾ ನಿಯಂತ್ರಣದ ಮೂಲಕ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿತು. ಜನಸಂಖ್ಯಾ ನಿಯಂತ್ರಣ ಸಾಧಿಸಿದ ರಾಜ್ಯಗಳಿಗೆ ಉತ್ತೇಜನ ನೀಡುವ ಬದಲು ಘೋರ ಶಿಕ್ಷೆ ನೀಡಲಾಯಿತು. ಇದನ್ನು ಸರಿಪಡಿಸಬೇಕಾದರೆ 1971ರ ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಇಟ್ಟುಕೊಳ್ಳಬೇಕು ಹಾಗೂ ಜನಸಂಖ್ಯೆಗೆ ನಿಗದಿಪಡಿಸಿರುವ ಪ್ರಾಮುಖ್ಯವನ್ನು ವೈಜ್ಞಾನಿಕವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
15ನೆ ಹಣಕಾಸು ಆಯೋಗವು ಜಿಎಸ್‍ಡಿಪಿಯನ್ನು ಲೆಕ್ಕ ಹಾಕುವಾಗ ಅಳವಡಿಸಿಕೊಂಡಿದ್ದ ಮೂಲವರ್ಷ (ಬೇಸ್ ಇಯರ್) 2004-05ರ ಬದಲು 2011-12ಕ್ಕೆ ಬದಲಾಯಿಸಿದ್ದರಿಂದ ಕರ್ನಾಟಕಕ್ಕೆ ಭಾರಿ ನಷ್ಟವಾಯಿತು. 2004-05ರಲ್ಲಿ ರಾಜ್ಯಗಳು ರಫ್ತಿನಲ್ಲಿ, ಉತ್ಪಾದನೆಯ ವಿಧಾನಗಳಲ್ಲಿ ತುಸು ಸಮೀಪವರ್ತಿಯಾಗಿದ್ದವು. ಐಟಿ ಕ್ರಾಂತಿ ಸಂಭವಿಸಿದ ನಂತರ ಕಾನೂನು ಸುವ್ಯವಸ್ಥೆ ಸೇರಿದಂತೆ ಯಾವ ರಾಜ್ಯವು ಅನುಕೂಲಕರವಾಗಿದೆಯೋ ಅಲ್ಲಿ ಐಟಿ ಕಂಪೆನಿಗಳು ನೆಲಸಿದವು. ಅವುಗಳಲ್ಲಿ ಬೆಂಗಳೂರು ಒಂದು.
ಐಟಿ ರಫ್ತಿನಿಂದ ಕೇಂದ್ರಕ್ಕೆ ಹಲವಾರು ಅನುಕೂಲಗಳಾಗುತ್ತಿವೆ. ನಮ್ಮಲ್ಲಿ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಚಟುವಟಿಕೆಗಳು ಒಂದಿಷ್ಟು ಹೆಚ್ಚಾಗಬಹುದು. ಆದರೆ ಐಟಿ ರಫ್ತಿನ ಕಾರಣಕ್ಕೆ ನಮ್ಮ ಜಿಎಸ್‍ಡಿಪಿ ಹೆಚ್ಚು ಹಿಗ್ಗಿದಂತೆ ಕಾಣುತ್ತದೆ. ಮೂಲ ವರ್ಷ ಬದಲಾಯಿಸಿದ ಕಾರಣಕ್ಕೆ ಕರ್ನಾಟಕದ ಜಿಎಸ್‍ಡಿಪಿ ಬೆಳವಣಿಗೆ ದರ ಶೇ.33ರಷ್ಟು ಹೆಚ್ಚಾಗಿರುವಂತೆ ಕಂಡು ಬಂದಿತು. ಇತರೆ ರಾಜ್ಯಗಳ ಸರಾಸರಿ ಏರಿಕೆ ಶೇ.5.6ರಷ್ಟು ಎಂದು ಲೆಕ್ಕ ಹಾಕಿದ ಕಾರಣ ನಮಗೆ ಅನ್ಯಾಯವಾಗಿದೆ. ಹೀಗಾಗಿ ಈ ಮಾನದಂಡವನ್ನು ವಾಸ್ತವಿಕವಾಗಿ ಲೆಕ್ಕ ಹಾಕಿ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
2014 ರಿಂದ ಈಚೆಗೆ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರವು ಅಳವಡಿಸಿಕೊಂಡ ನೀತಿಗಳಿಂದಾಗಿ ಸಂಪತ್ತು ಕೆಲವೇ ಜನರ ಬಳಿ ಕೇಂದ್ರೀಕೃತವಾಗುತ್ತಿದೆ. ಜಾಗತಿಕ ಅಸಮಾನತಾ ಸೂಚ್ಯಂಕದ ಅಧ್ಯಯನಗಳ ಪ್ರಕಾರ, ಶೇ.50ರಷ್ಟಿರುವ ಬಡ ಜನರು ಕೇವಲ ಶೇ.15ರಷ್ಟು ಆದಾಯ ಗಳಿಸುತ್ತಿದ್ದಾರೆ. ಶೇ.10ರಷ್ಟಿರುವ ಶ್ರೀಮಂತರು ಶೇ.58ಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಈ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಅಳತೆ ಮಾಡಿ ಅದನ್ನು ಆದಾಯ ದೂರ ಎಂಬ ಸೂತ್ರಕ್ಕೆ ತಂದು ಅನುದಾನಗಳನ್ನು ಖೋತಾ ಮಾಡುವುದು ಅನ್ಯಾಯವಾಗುತ್ತದೆ ಎಂದು ಹೇಳಿದ್ದೇವೆ. ಕಲ್ಯಾಣ ಕರ್ನಾಟಕವೂ ಸೇರಿದಂತೆ ಕೆಲವು ಜಿಲ್ಲೆಗಳ ತಲಾ ಆದಾಯ ದೇಶದ ಸರಾಸರಿ ತಲಾ ಆದಾಯಕ್ಕಿಂತ ಕಡಿಮೆ ಇದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ ಈ ಸೂತ್ರವನ್ನು ಶೇ.45ರ ಬದಲು ಶೇ.25ಕ್ಕೆ ಇಳಿಸಬೇಕು ಎಂದು ಅವರು ಕೋರಿದ್ದಾರೆ.
‘15ನೇ ಹಣಕಾಸು ಆಯೋಗವು ರಾಜ್ಯದ ಪಾಲನ್ನು ಶೇ.3.64ಕ್ಕೆ ಇಳಿಸುವ ಮೂಲಕ ಘೋರ ಅನ್ಯಾಯ ಮಾಡಿತು. ಉದಾಹರಣೆಗೆ, ರಾಜ್ಯಗಳಿಗೆ ಹಂಚಿಕೆ ಮಾಡುವ 100 ರೂ.ಗಳಲ್ಲಿ ಮೊದಲು ಕರ್ನಾಟಕಕ್ಕೆ 4.71 ರೂ.ಸಿಗುತ್ತಿದ್ದರೆ, 15ನೇ ಆಯೋಗವು ಅದನ್ನು 3.64 ರೂ.ಗೆ ಇಳಿಸಿತು. ಇದರಿಂದ ರಾಜ್ಯಕ್ಕೆ ನೇರವಾಗಿ ಸುಮಾರು 80 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ತೆರಿಗೆ ಪಾಲು ಸಿಗದೆ ಅನ್ಯಾಯವಾಯಿತು. ದೇಶದ ಆರ್ಥಿಕ ಶಕ್ತಿಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕ ತಲಾವಾರು ಆರ್ಥಿಕ ಉತ್ಪಾದಕತೆಯಲ್ಲಿ ಮೊದಲ ಸ್ಥಾನದಲ್ಲಿದೆ. ತೆರಿಗೆ, ಸೆಸ್ ಮುಂತಾದ ರೂಪದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದಿಂದ 4.5 ಲಕ್ಷ ಕೋಟಿ ರೂ.ಗಳಿಂದ 5ಲಕ್ಷ ಕೋಟಿ ರೂ.ಗಳಷ್ಟು ಸಂಗ್ರಹಿಸುತ್ತದೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ