×
Ad

Bengaluru | ಐಟಿ ದಾಳಿ ವೇಳೆಯೇ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಆತ್ಮಹತ್ಯೆ

Update: 2026-01-30 18:13 IST

 ಸಿ.ಜೆ.ರಾಯ್‌

ಬೆಂಗಳೂರು : ರಿಯಲ್ ಎಸ್ಟೇಟ್ ಸಂಸ್ಥೆಯಾಗಿರುವ ‘ಕಾನ್ಫಿಡೆಂಟ್ ಗ್ರೂಪ್’ನ ಸ್ಥಾಪಕ ಹಾಗೂ ಅಧ್ಯಕ್ಷ ಸಿ.ಜೆ.ರಾಯ್(57) ಅವರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಪಿಸ್ತೂಲ್‍ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದಾಯ ತೆರಿಗೆ(ಐಟಿ) ಇಲಾಖೆಯ ಅಧಿಕಾರಿಗಳು ಕಚೇರಿಯ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ತೀವ್ರ ಸಂಚಲನ ಮೂಡಿಸಿದೆ.

ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲ್ಯಾಂಗ್‍ಫೋರ್ಡ್ ರಸ್ತೆಯಲ್ಲಿರುವ ‘ಕಾನ್ಫಿಡೆಂಟ್ ಗ್ರೂಪ್’ನ ಪ್ರಧಾನ ಕಚೇರಿ ಮೇಲೆ ಶುಕ್ರವಾರ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಧ್ಯಾಹ್ನದ ವೇಳೆಗೆ ಕಚೇರಿಗೆ ಆಗಮಿಸಿದ ಸಂಸ್ಥೆಯ ಮಾಲಕ ಸಿ.ಜೆ.ರಾಯ್ ಅವರನ್ನು ಅಧಿಕಾರಿಗಳು ಸುಮಾರು ಒಂದು ಗಂಟೆಯ ಕಾಲ ವಿಚಾರಣೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ವಿಚಾರಣೆಯ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ನೀಡುವಂತೆ ಅಧಿಕಾರಿಗಳು ಕೇಳಿದಾಗ, ದಾಖಲೆ ತರುತ್ತೇನೆ ಎಂದು ಹೇಳಿ ರಾಯ್ ತಮ್ಮ ಕೊಠಡಿಗೆ ತೆರಳಿದರು ಎನ್ನಲಾಗಿದೆ. ಈ ವೇಳೆ ತಮ್ಮ ಬಳಿಯಿದ್ದ ಪಿಸ್ತೂಲ್‍ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣವೇ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರನ್ನು ಎಚ್‍ಎಸ್‍ಆರ್ ಲೇಔಟ್‍ನ ನಾರಾಯಣ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ, ಮಾರ್ಗಮಧ್ಯೆಯೇ ರಾಯ್ ಅವರು ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಎಂ.ಹಕೇ ನೇತೃತ್ವದ ಅಶೋಕನಗರ ಠಾಣಾ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನೆ ನಡೆದ ಕೊಠಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಆತ್ಮಹತ್ಯೆಗೆ ಬಳಸಿದ ಪಿಸ್ತೂಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಯಾವುದೇ ಡೆತ್‍ನೋಟ್ ಬರೆದಿಟ್ಟಿದ್ದಾರೆಯೇ? ಅಥವಾ ಮೊಬೈಲ್‍ಫೋನ್‍ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸಿದ್ದಾರೆಯೇ? ಎಂಬ ಬಗ್ಗೆ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ತಾಂತ್ರಿಕ ತಂಡ ಪರಿಶೀಲಿಸುತ್ತಿದೆ. ಮೃತರು ಪತ್ನಿ ಲಿನಿ ರಾಯ್ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸಾಧಾರಣ ಉದ್ಯೋಗಿಯಿಂದ ಉದ್ಯಮ ಸಾಮ್ರಾಜ್ಯದವರೆಗೆ:

‘ಕೇರಳ ಮೂಲದವರಾದ ಸಿ.ಜೆ.ರಾಯ್, 1997ರಲ್ಲಿ ಎಚ್‍ಪಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟ ಅವರು ಕಾನ್ಫಿಡೆಂಟ್ ಗ್ರೂಪ್ ಕಟ್ಟಿದರು. ಬೆಂಗಳೂರು, ಕೇರಳ ಹಾಗೂ ದುಬೈನಲ್ಲಿ 165ಕ್ಕೂ ಹೆಚ್ಚು ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸಿದ್ದರು. ಸದ್ಯ, ಕಾನ್ಫಿಡೆಂಟ್ ಗ್ರೂಪ್ 15,000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ರಿಯಲ್ ಎಸ್ಟೇಟ್ ಜೊತೆಗೆ, ರಾಯ್ ಅವರು ಮನರಂಜನೆ, ಶಿಕ್ಷಣ, ಆತಿಥ್ಯ, ಗಲ್ಫ್, ಚಿಲ್ಲರೆ ವ್ಯಾಪಾರ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಂತಹ ವಿವಿಧ ಕ್ಷೇತ್ರಗಳಲ್ಲಿಯೂ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದರು. ಅಲ್ಲದೆ, ರಾಯ್ ಅವರು ಚಿತ್ರರಂಗದಲ್ಲೂ ಗುರುತಿಸಿಕೊಂಡು ಮಲಯಾಳಂನ ‘ಮರಕ್ಕಾರ್’ ಸಿನಿಮಾ ಸೇರಿದಂತೆ 11 ಸಿನಿಮಾಗಳಿಗೆ ನಿರ್ಮಾಪಕರಾಗಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News