×
Ad

ರಾಜ್ಯದಲ್ಲಿ ಮತ್ತೆ ಸಮೀಕ್ಷೆ ನಡೆಸುತ್ತಿರುವುದು ದೊಡ್ಡ ಅನಾಹುತ : ಬಸವರಾಜ ಹೊರಟ್ಟಿ

Update: 2025-09-17 22:18 IST

ಬೆಂಗಳೂರು, ಸೆ.17: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಮರು ಸಮೀಕ್ಷೆ ನಡೆಸುತ್ತಿರುವುದೇ ದೊಡ್ಡ ಅನಾಹುತ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪಿಸಿದ್ದಾರೆ.

ಬುಧವಾರ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರು ಸಮೀಕ್ಷೆ ಯಾರಿಗೂ ಅವಶ್ಯಕತೆ ಇರಲಿಲ್ಲ. ಇಂತಹ ಸಮೀಕ್ಷೆ ಈವರೆಗೆ ಇರಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದನ್ನು ಆರಂಭಿಸಿದ್ದೇ ದೊಡ್ಡ ಅನಾಹುತ ಎಂದರು.

ಲಿಂಗಾಯತ, ಪಂಚಮಸಾಲಿ, ಮತ್ತೊಂದು, ಮಗದೊಂದು ಎಂದು ಚರ್ಚೆ ಹುಟ್ಟುಹಾಕಲಾಗಿದೆ. ಇದರಿಂದ ಭವಿಷ್ಯದಲ್ಲಿ ಸಮಾಜಕ್ಕೆ ದೊಡ್ಡ ಹೊಡೆತ ಬೀಳಲಿದೆ. ಕೆಲವರು ವೀರಶೈವ ಎಂದರೆ, ಉಳಿದವರು ಲಿಂಗಾಯತ ಎನ್ನುತ್ತಾರೆ. ಮತ್ತೊಂದಿಷ್ಟು ಜನ ವೀರಶೈವ ಲಿಂಗಾಯತ ಎಂದೂ ಉಲ್ಲೇಖಿಸುತ್ತಿದ್ದಾರೆ. ಇದೆಲ್ಲಾ ಏಕೆ ಬೇಕಿತ್ತು? ಎಂದು ಅವರು ಪ್ರಶ್ನಿಸಿದರು.

ಈ ಹಿಂದೆ ಇದ್ದ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದರೆ ಸಾಕಿತ್ತು. ಹಿಂದೂ ಲಿಂಗಾಯತ ಎಂದು ಹೇಳಿದ್ದರೆ ಮುಗಿದು ಹೋಗುತ್ತಿತ್ತು. ಆದರೆ, ಇದನ್ನು ಕೆಲವರು ಪ್ರಸ್ತಾಪಿಸುವ ಮೂಲಕ ತಮ್ಮ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಇರುವವರ ಹೆಸರನ್ನು ಹೇಳುವುದಿಲ್ಲ. ಅಲ್ಲದೇ, ನಾನು ಆ ಸಭೆಯಲ್ಲಿ ಭಾಗವಹಿಸಲ್ಲ, ಯಾರ ಬಗ್ಗೆಯೂ ಮಾತಾಡಲ್ಲ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News