×
Ad

‘ಸಾರಿಗೆ ನೌಕರರ ಮುಷ್ಕರ’ : ರಾಜ್ಯಾದ್ಯಂತ ಪ್ರಯಾಣಿಕರ ಪರದಾಟ

► ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ►ರಸ್ತೆಗಿಳಿದ ಖಾಸಗಿ ಬಸ್ಸುಗಳು ► ಹೈಕೋರ್ಟ್ ಸೂಚನೆ ಮೇರೆಗೆ ಮುಷ್ಕರ ಮುಂದೂಡಿಕೆ

Update: 2025-08-06 00:28 IST

ಬೆಂಗಳೂರು: ಸರಕಾರ ನಡೆಸಿದ ಸಂಧಾನ ಸಭೆ ವಿಫಲ, ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ ಮೂವತ್ತೆಂಟು ತಿಂಗಳ ವೇತನ ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿದ್ದ ಮುಷ್ಕರದಿಂದಾಗಿ ರಾಜ್ಯಾದ್ಯಂತ ಪ್ರಯಾಣಿಕರು ಪರದಾಡುವಂತಾಯಿತು.

ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮುಷ್ಕರದ ಮಾಹಿತಿ ಇಲ್ಲದ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗಾವಿ, ಹಾಸನ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಚಾಮರಾಜನಗರ, ತುಮಕೂರು, ಕೊಡಗು, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಪ್ರಯಾಣಿಕರು ಖಾಸಗಿ ಬಸ್ಸುಗಳು ಹಾಗೂ ವಾಹನಗಳ ಮೊರೆ ಹೋದರು.

ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಬಸ್‍ಗಳಿಲ್ಲದೆ ಪರದಾಡುತ್ತಿದ್ದ ಜನರನ್ನು ನಗರ ಪೊಲೀಸ್ ಆಯುಕ್ತ ಗುಲಾಬ್‍ರಾವ್ ಬೊರಸೆ ಹಾಗೂ ಡಿಸಿಪಿ ನಾರಾಯಣ ಬರ್ಮನಿ, ತಮ್ಮ ಸಿಬ್ಬಂದಿಯ ಸಹಕಾರೊಂದಿಗೆ ಖಾಸಗಿ ಬಸ್ಸುಗಳು ಹಾಗೂ ವಾಹನಗಳ ಮೂಲಕ ಅವರವರ ಊರುಗಳಿಗೆ ತಲುಪಿಸಲು ವ್ಯವಸ್ಥೆ ಮಾಡುತ್ತಿದ್ದದ್ದು ಕಂಡು ಬಂತು.

ಹುಬ್ಬಳ್ಳಿಯಿಂದ ಹೊಸಪೇಟೆಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್ಸಾರ್ಟಿಸಿ) ಬಸ್ ಮೇಲೆ ಹುಬ್ಬಳ್ಳಿ ಬೈಪಾಸ್ ಸಮೀಪ ಅನಾಮಿಕ ಮುಸುಕುಧಾರಿ ವ್ಯಕ್ತಿಗಳು ಕಲ್ಲು ಎಸೆದ ಪರಿಣಾಮ ಬಸ್‍ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಆದರೆ, ಅದೃಷ್ಟವಶಾತ್ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಯಾವುದೆ ತೊಂದರೆಯಾಗಿಲ್ಲ ಎಂದು ಗೊತ್ತಾಗಿದೆ.

ಕಲಬುರಗಿಯಲ್ಲೂ ಸರಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ, ಮುಷ್ಕರದ ಮಾಹಿತಿ ಇಲ್ಲದೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಪರದಾಡುತ್ತಿದ್ದರು. ಪರಿಸ್ಥಿತಿಯನ್ನು ನಿಭಾಯಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಖಾಸಗಿ ಬಸ್‍ಗಳನ್ನು ರಸ್ತೆಗಿಳಿಸಿ ಪ್ರಯಾಣಿಕರಿಗೆ ನೆರವಾದರು. ಅದೇ ರೀತಿ, ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಿಂದ ವಿವಿಧ ಜಿಲ್ಲೆಗಳಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ಬೆಂಗಳೂರಿನಲ್ಲಿ ಮಿಶ್ರಪ್ರತಿಕ್ರಿಯೆ:

ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಗಳೂರಿನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಿಎಂಟಿಸಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸರಕಾರ ನೀಡಿದ ಎಚ್ಚರಿಕೆಗೆ ಮಣಿದು, ಬಹುತೇಕ ಚಾಲಕರು ಹಾಗೂ ನಿರ್ವಾಹಕರು ಕತ್ರ್ಯವಕ್ಕೆ ಹಾಜರಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಷ್ಕರದ ಬಿಸಿ ಹೆಚ್ಚಾಗಿ ಕಂಡು ಬರಲಿಲ್ಲ.

ಅಲ್ಲದೇ, ಮುಷ್ಕರದ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳು, ಆಟೋ, ಒಲಾ, ಊಬರ್ ಹಾಗೂ ಮೆಟ್ರೋ ಬಳಸಿದ್ದರಿಂದ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಧ್ಯಾಹ್ನದ ವರೆಗೆ ಇಳಿಮುಖವಾಗಿಯೆ ಇತ್ತು. ಬಹುತೇಕ ಬಿಎಂಟಿಸಿ ಬಸ್‍ಗಳು ಎಂದಿನಂತೆ ಕಾರ್ಯಾಚರಣೆ ತೊಡಗಿದ್ದವು.

ಹೈಕೋರ್ಟ್ ಸೂಚನೆ ಮೇರೆಗೆ ಮುಷ್ಕರ ಮುಂದೂಡಿಕೆ:

‘ರಾಜ್ಯ ಹೈಕೋರ್ಟ್ ಸೂಚನೆಯ ಮೇರೆಗೆ ರಾಜ್ಯಾದ್ಯಂತ ತಕ್ಷಣದಿಂದಲೇ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿಕೆ ಮಾಡಲಾಗುತ್ತಿದೆ’ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಪ್ರಕಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News