×
Ad

ಬೆಂಗಳೂರು: ಸಂವಿಧಾನಾತ್ಮಕ ಪ್ರತಿಭಟನೆಯ ಹಕ್ಕಿನ ಉಲ್ಲಂಘನೆ ನಿಲ್ಲಿಸುವಂತೆ ಜನಾಂದೋಲನ, ಸಿಎಂಗೆ ಬಹಿರಂಗ ಪತ್ರ

Update: 2024-09-10 18:05 IST

ಬೆಂಗಳೂರು: ಸಂವಿಧಾನಾತ್ಮಕ ಪ್ರತಿಭಟನೆಯ ಹಕ್ಕಿನ ಉಲ್ಲಂಘನೆಯನ್ನು ನಿಲ್ಲಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದ 2021ರ ಆದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕು ಎಂದು ಪ್ರಗತಿಪರ, ಚಳುವಳಿಗಾರರ ಸಂಯುಕ್ತ ವೇದಿಕೆ ವತಿಯಿಂದ ಜನಾಂದೋಲನದ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರವನ್ನು ಬರೆಯಲಾಗಿದೆ.

2021ರ ಪ್ರತಿಭಟನೆ, ಪ್ರದರ್ಶನ ಮತ್ತು ಪ್ರತಿಭಟನಾತ್ಮಕ ಮೆರವಣಿಗೆಗಳ ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶದ ಅನ್ವಯ 2022ರ ಜನವರಿಯಿಂದ ಬೆಂಗಳೂರು ನಗರ ಪೊಲೀಸರು ನಮ್ಮ ಮೂಲಭೂತ ಹಕ್ಕಾದ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಿದ್ದಾರೆ. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತಿರುವ ಬೆಂಗಳೂರು ಪೊಲೀಸರು ಅಧಿಕಾರ ದುರುಪಯೋಗದಲ್ಲಿ ನಿರತರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಮ್ಮ ಪ್ರತಿಭಟನೆಗಳನ್ನು ಪ್ರೀಡಂ ಪಾರ್ಕ್ ಗೆ ಸೀಮಿತಗೊಳಿಸಿರುವುದಲ್ಲದೆ, ಪೊಲೀಸರು ಮೆರವಣಿಗೆಗಳಿಗೆ ಅನುಮತಿಯನ್ನು ಕೂಡ ನಿರಾಕರಿಸುತ್ತಿದ್ದಾರೆ. ಈ ಹಿಂದೆ ನಗರದ ಯಾವುದೇ ಭಾಗದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಸಿಗುತ್ತಿತ್ತು. ಈಗಿನ ನಿಲುವು ಇದಕ್ಕೆ ವಿರುದ್ಧವಾಗಿದೆ. ಪ್ರತಿಭಟನೆಗೆ ಅನುಮತಿ ನೀಡುವ ಏಕೈಕ ಪ್ರದೇಶವಾದ ಪ್ರೀಡಂ ಪಾರ್ಕ್ ನಲ್ಲೂ ಯಾವುದರ ವಿರುದ್ಧ ಪ್ರತಿಭಟನೆ ಮಾಡಬಹುದು, ಯಾವುದರ ವಿರುದ್ಧ ಪ್ರತಿಭಟನೆ ಮಾಡುವಂತಿಲ್ಲ ಎಂಬುದನ್ನೂ ಪೊಲೀಸರು ನಿರ್ದೇಶಿಸುತ್ತಿದ್ದು, ಇದು ಏಕಪಕ್ಷೀಯ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಪತ್ರದಲ್ಲಿ ಸಿಎಂ ಗಮನಕ್ಕೆ ತರಲಾಗಿದೆ.

ಸೆ.15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿದ್ದು, ಇದಕ್ಕೂ ಮೊದಲೇ ಸಂಯುಕ್ತ ವೇದಿಕೆ ವತಿಯಿಂದ ಸಿಎಂಗೆ ಪತ್ರವನ್ನು ಬರೆಯಲಾಗಿದೆ. ಪ್ರಜಾಪ್ರಭುತ್ವದ ಮೂಲ ಲಕ್ಷಣಗಳನ್ನು ಪ್ರೋತ್ಸಾಹಿಸಲು ಹಾಗೂ ಎತ್ತಿಹಿಡಿಯಲು ಸೆ. 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಗೆ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು 2007ರಲ್ಲಿ ನಿರ್ಧರಿಸಿತ್ತು. 2023ರಲ್ಲಿ ನಿಮ್ಮ ಸರ್ಕಾರವು ರಾಜ್ಯದಾದ್ಯಂತ ಈ ದಿನವನ್ನು ಆಚರಣೆ ಮಾಡಿದ್ದು, ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ನೀವು ಆ ದಿನದ ಆಚರಣೆಗಳಿಗೆ ಚಾಲನೆ ನೀಡಿದ್ದಿರಿ. ಆದರೆ, ಅದೇ ವಿಧಾನ ಸೌಧದ ಮೆಟ್ಟಿಲುಗಳು ಅಥವಾ ಪುರಭವನದ ಮೆಟ್ಟಿಲುಗಳ ಮೇಲಿಂದ ಅದೇ ಸಂವಿಧಾನದ ಪೀಠಿಕೆಯನ್ನು ಓದಲು ಮತ್ತು ಪೀಠಿಕೆಯ ಮೌಲ್ಯಗಳನ್ನು ಅನುಷ್ಠಾನಕ್ಕೆ ತರಲು ನಮ್ಮಂತಹ ನಾಗರಿಕರಿಗೆ ಅವಕಾಶ ನೀಡದೆ ಇರುವುದು ದುರಾದೃಷ್ಟಕರ. ರಾಜ್ಯದ ಉದ್ದಗಲಕ್ಕೂ ಬೃಹತ್ ಮಾನವ ಸರಪಳಿಯನ್ನು ರಚನೆ ಮಾಡುವ ಮೂಲಕ ಈ ವರ್ಷದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನೀವು ಸಿದ್ಧತೆ ನಡೆಸಿದ್ದು, ನಮ್ಮ ಪ್ರತಿಭಟನೆಯ ಹಕ್ಕನ್ನು ಖಾತ್ರಿಪಡಿಸದೆ ಇದ್ದಲ್ಲಿ ಅದೊಂದು ಪೊಳ್ಳು ಆಚರಣೆಯಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಪತ್ರದಲ್ಲಿ ಈ ಕೆಳಗಿನ ಹಕ್ಕೊತ್ತಾಯಗಳನ್ನು ಕೂಡ ಮಂಡಿಸಲಾಗಿದೆ:

1. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಸೆ.15ರಂದು ಮುಖ್ಯಮಂತ್ರಿಗಳು ಪ್ರತಿಭಟನೆಗಳನ್ನು ಪ್ರೀಡಂ ಪಾರ್ಕ್ ಗೆ ಸೀಮಿತಗೊಳಿಸುವ ಆದೇಶವನ್ನು ರದ್ದುಪಡಿಸಬೇಕು ಹಾಗೂ ಆ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯುವ ಸಕಾರದ ಬದ್ಧತೆಯನ್ನು ಪುನರುಚ್ಚರಿಸಬೇಕು.

2. ಪ್ರತಿಭಟನೆ, ಪ್ರತಿಭಟನಾತ್ಮಕ ಮೆರವಣಿಗೆಗಳ ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶ 2021’ನ್ನು ಈ ಕೂಡಲೆ ಹಿಂಪಡೆಯಬೇಕು ಮತ್ತು 2009ರ ಸಭೆ ಮತ್ತು ಸಾರ್ವಜನಿಕ ಮೆರವಣಿಗೆ ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶವನ್ನು ಮತ್ತೆ ಜಾರಿಗೆ ತರಬೇಕು.

3. ಪ್ರತಿಭಟನೆಯ ಹಕ್ಕನ್ನು ಚಲಾಯಿಸಿದ ಪ್ರತಿಭಟನೆಗಾರರ ಮೇಲೆ ದಾಖಲಿಸಿರುವ ಎಲ್ಲ ಮೊಕದ್ದಮೆಗಳನ್ನು ರದ್ದುಪಡಿಸಬೇಕು.

4. ಪ್ರತಿಭಟನೆಗಾರರನ್ನು ಪೊಲೀಸರು ಹಿಂಸಾತ್ಮಕವಾಗಿ ಥಳಿಸಿದ ಬಗ್ಗೆ ನಿಷ್ಪಕ್ಶಪಾತ ತನಿಖೆ ನಡೆಸಬೇಕು

https://docs.google.com/forms/d/e/1FAIpQLSfstvmCh9iO_Iqao7yOFZ3ULJ96G6GOLi9E2b_43H9tV3LC2w/viewform

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News