ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ
Photo: X/@DKShivakumar
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಬಿಜೆಪಿಯ ಸಂಸದ ಬಿ.ವೈ. ರಾಘವೇಂದ್ರ, ಮಹತ್ವದ ಬೆಳವಣಿಗೆಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶನಿವಾರ ಇಲ್ಲಿನ ಸದಾಶಿವನಗರದಲ್ಲಿನ ಡಿಕೆಶಿ ನಿವಾಸಕ್ಕೆ ಆಗಮಿಸಿದ ಬಿ.ವೈ.ರಾಘವೇಂದ್ರ, ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ನಿನ್ನೆ ಬಿಜೆಪಿಯ ಶಾಸಕ ಬಿ.ಪಿ.ಹರೀಶ್ ಹಾಗೂ ದಾವಣಗೆರೆಯ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ರಹಸ್ಯ ಚರ್ಚೆ ನಡೆಸಿದ್ದರು. ಅದರ ಬೆನ್ನಲ್ಲೇ ರಾಘವೇಂದ್ರ ಭೇಟಿ ಮಹತ್ವ ಪಡೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಘವೇಂದ್ರ, ಪುತ್ರನ ಮದುವೆ ಇದೆ, ಹೀಗಾಗಿ ಮದುವೆ ಆಮಂತ್ರಣ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಂದಿದ್ದೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿ ವಿಚಾರ ಕುರಿತು ಚರ್ಚೆ ಮಾಡಿದ್ದೇನೆ. ಭೇಟಿಗೆ ಅವರು ಸಮಯ ನೀಡಿದ್ದರು, ಅದರಂತೆ ಇಂದು ಭೇಟಿ ಮಾಡಿದ್ದೇನೆ ಎಂದು ಸ್ಪಷ್ಟಣೆ ನೀಡಿದರು.
ವೈಯಕ್ತಿಕ ವಿಚಾರಕ್ಕೆ ಮಾತ್ರ ನಾನು ಡಿಕೆಶಿ ಅವರನ್ನು ಭೇಟಿ ಮಾಡಿದ್ದೇನೆ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ರಾಜಕೀಯ ಚರ್ಚೆ ಇಲ್ಲ. ಅಧಿಕಾರದಲ್ಲಿದ್ದಾಗ, ಸರಕಾರವಿದ್ದಾಗ ಪಕ್ಷಬೇಧ ಮರೆತು ಭೇಟಿ ಮಾಡುವುದು ಸಾಮಾನ್ಯ. ಹೀಗಾಗಿ ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಅವರು ವಿವರಣೆ ನೀಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರು ಇಂದು ಗೃಹಕಚೇರಿಯಲ್ಲಿ ತಮ್ಮ ಪುತ್ರನ ವಿವಾಹ ಆಮಂತ್ರಣ ನೀಡಿ ಆಹ್ವಾನಿಸಿದರು. pic.twitter.com/b56EEcyuds
— DK Shivakumar (@DKShivakumar) April 19, 2025