ಆರೆಸ್ಸೆಸ್ ಭಾರತ ದೇಶದ ತಾಲಿಬಾನ್ : ಬಿ.ಕೆ.ಹರಿಪ್ರಸಾದ್
"ಆರೆಸ್ಸೆಸ್ ನೋಂದಣಿ ಆಗಿರುವ ಒಂದು ಸಂಘಟನೆ ಅಲ್ಲ"
ಬಿ.ಕೆ.ಹರಿಪ್ರಸಾದ್
ಹೊಸದಿಲ್ಲಿ : ʼಆರೆಸ್ಸೆಸ್ ಭಾರತ ದೇಶದ ತಾಲಿಬಾನ್ʼ ಎಂದು ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು(ಆರೆಸ್ಸೆಸ್) ಹೊಗಳಿದ್ದಕ್ಕೆ ಬಿ.ಕೆ.ಹರಿಪ್ರಸಾದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼಆರೆಸ್ಸೆಸ್ ನೋಂದಣಿ ಆಗಿರುವ ಒಂದು ಸಂಘಟನೆ ಅಲ್ಲ. ಇಡೀ ದೇಶದಲ್ಲಿ ದೊಡ್ಡ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ, ಅವರಿಗೆ ಹಣ ಎಲ್ಲಿಂದ ಬರುತ್ತದೆ. ದೇಶದಲ್ಲಿ ಶಾಂತಿ ಕದಡಲು ಆರೆಸ್ಸೆಸ್ ಯತ್ನಿಸುತ್ತಿದೆ. ಆರೆಸ್ಸೆಸ್ ಭಾರತ ದೇಶದ ತಾಲಿಬಾನ್ ಅನ್ನೋದು ಎಲ್ಲರಿಗೂ ಗೊತ್ತಿದೆʼ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ಇತಿಹಾಸವನ್ನು ತಿರುಚುವಲ್ಲಿ ನಿಪುಣರು. ಕಳೆದ 52 ವರ್ಷಗಳಿಂದ ಆರೆಸ್ಸೆಸ್ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿಲ್ಲ ಯಾಕೆ?. ದೇಶಕ್ಕಾಗಿ ಪ್ರಾಣ ತೆತ್ತವರ ಹೆಸರನ್ನು ಹೇಳುವುದನ್ನು ಬಿಟ್ಟು ಮೋದಿ ಅವರು ಓಲೈಕೆಗಾಗಿ ಆರೆಸ್ಸೆಸ್ ಅನ್ನು ಹೊಗಳಿದ್ದು ಸರಿಯಲ್ಲ. ಮೋದಿ ಕೆಂಪು ಕೋಟೆಯಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.