ʼಪಥ ಸಂಚಲನʼ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ? : ಬಿ.ಕೆ.ಹರಿಪ್ರಸಾದ್
"ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ"
ಬಿ.ಕೆ.ಹರಿಪ್ರಸಾದ್
ಬೆಂಗಳೂರು : ʼಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ ಬಿ.ಎಲ್.ಸಂತೋಷ್ ಅವರೇ, ದೇಶದ ಜನರಲ್ಲಿ ಆತ್ಮವಿಶ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ಮಾತ್ರʼ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ರವಿವಾರ ಸಾಮಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಪಥ ಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ? ದೊಣ್ಣೆ, ಲಾಟಿ, ಬೂಟಿನ ಪಥ ಸಂಚಲನದಿಂದ ಸಮಾಜದಲ್ಲಿ ಭಯ, ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ. ಪಥ ಸಂಚಲನದ ಉದ್ದೇಶವೇ ಭಯದ ವಾತಾವರಣದ ನಿರ್ಮಾಣ ಎನ್ನುವುದು ಸ್ಪಷ್ಟ ಎಂದು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರೆಸ್ಸೆಸ್ "ಪೇಯ್ಡ್" ಸಂಘಟನೆಯಲ್ಲ ಎಂದಾದರೇ ದೇಶ-ವಿದೇಶಿ ಮೂಲದಿಂದಲೂ ಹರಿದು ಬರುತ್ತಿರುವ ಹಣಕ್ಕೆ ಹೊಣೆ ಯಾರು? ಸಮಾಜ ಸೇವೆ ಮಾಡಲು ಆರೆಸ್ಸೆಸ್ ಸರಕಾರಿ ಸಂಸ್ಥೆಯೂ ಅಲ್ಲ, ಸರಕಾರೇತರ ಸಂಸ್ಥೆಯೂ ಅಲ್ಲ, ಕನಿಷ್ಟ ನೊಂದಾವಣಿಯೂ ಆಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ? ವಿದೇಶದಿಂದ ಆರೆಸ್ಸೆಸ್ ಗೆ ಮಾತ್ರ ಹಣ ಬರಲಿ ಎಂಬ ಕಾರಣಕ್ಕಾಗಿಯೇ ಅಲ್ಲವೇ ಎನ್.ಜಿ.ಓ ಗಳಿಗೆ ವಿದೇಶಿ ಫಂಡ್ ಬರುವುದನ್ನು ನಿಲ್ಲಿಸಿರುವುದು ಎಂದು ಉಲ್ಲೇಖಿಸಿದ್ದಾರೆ.
ನೂರು ವರ್ಷದ ಇತಿಹಾಸದಲ್ಲಿ ದೊಣ್ಣೆ ಹಿಡಿದು ಸಾಗಿರುವ ಪಥಸಂಚಲನದಿಂದ ಸಮಾಜಕ್ಕೆ ಆಗಿರುವ ಲಾಭವೇನು? ಹಾದಿ ಬೀದಿಯಲ್ಲಿ ದೊಣ್ಣೆ ಹಿಡಿದು ಶಾಂತಿ-ಸುವ್ಯವಸ್ಥೆಯನ್ನು ಹಾಳು ಮಾಡಿದ್ದೇ ಸಾಧನೆಯೇ? ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ, ಬೇಗ ಎಚ್ಚೆತ್ತುಕೊಳ್ಳದಿದ್ದರೇ ಸಂಘಕ್ಕೆ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ.