ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ| ಅಮಿತ್ ಶಾ ರಾಜೀನಾಮೆ ನೀಡಲಿ: ಪ್ರಿಯಾಂಕ್ ಖರ್ಗೆ ಆಗ್ರಹ
"ಬೇರೆ ಯಾವುದೇ ದೇಶದಲ್ಲಿ ಗೃಹ ಸಚಿವರು ತಮ್ಮ ಸ್ಥಾನ ತೊರೆದು ಹೊಣೆ ಹೊರುತ್ತಿದ್ದರು"
ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: “ಅಮಿತ್ ಶಾ ಅವರ ರಾಜೀನಾಮೆ ನೀಡಬೇಕಾದರೆ ಇನ್ನೂ ಎಷ್ಟು ಜನರು ಸಾಯಬೇಕು? ಬೇರೆ ಯಾವುದೇ ದೇಶದಲ್ಲಿ ಇಂತಹ ಸಂದರ್ಭದಲ್ಲೇ ಗೃಹ ಸಚಿವರು ತಮ್ಮ ಸ್ಥಾನ ತೊರೆದು ಹೊಣೆ ಹೊರುತ್ತಿದ್ದರು,” ಎಂದು ಕರ್ನಾಟಕದ ಪಂಚಾಯತ್ ರಾಜ್ ಹಾಗೂ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಅಮಿತ್ ಶಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, "ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭಾರತದ ಇತಿಹಾಸದಲ್ಲೇ ಅತ್ಯಂತ ಅಸಮರ್ಥ ಗೃಹ ಸಚಿವ” ಎಂದು ಹೇಳಿದರು.
“ದಿಲ್ಲಿ, ಮಣಿಪುರ, ಪುಲ್ವಾಮಾ, ಪಹಲ್ಗಾಮ್... ಎಲ್ಲೆಡೆ ದುರ್ಘಟನೆಗಳು ನಡೆದರೂ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಗುಪ್ತಚರ ವ್ಯವಸ್ಥೆ ವಿಫಲವಾಗಿದೆ. ಸಾವಿರಾರು ಜನರ ಜೀವ ಹೋಗಿದೆ. ಅಮಿತ್ ಶಾ ಎಷ್ಟು ದಿನ ಗೃಹ ಖಾತೆಯಲ್ಲಿ ಉಳಿಯಲಿದ್ದಾರೆ? ಪ್ರಧಾನಿ ಮೋದಿ ಅವರು ಅಮಿತ್ ಶಾಗೆ ಏಕೆ ಇಷ್ಟು ಹೆದರುತ್ತಾರೆ? ಗುಜರಾತ್‌ನ ರಹಸ್ಯಗಳು ಬಹಿರಂಗವಾಗುತ್ತವೆ ಎಂಬ ಭಯವೇ?” ಎಂದು ಅವರು ಪ್ರಶ್ನಿಸಿದರು.
ಚುನಾವಣೆ ಭಾಷಣಗಳಲ್ಲಿ ಅಮಿತ್ ಶಾ ನೀಡಿದ್ದ ಹೇಳಿಕೆಗಳನ್ನೂ ಪ್ರಿಯಾಂಕ್ ಖರ್ಗೆ ಟೀಕಿಸಿದರು. “ಗೃಹ ಸಚಿವರಾಗಿ ಅವರು ಬಾಂಗ್ಲಾದೇಶಿಗಳು ದೇಶ ಪ್ರವೇಶಿಸುತ್ತಿದ್ದಾರೆ ಎಂದು ಚುನಾವಣಾ ಭಾಷಣಗಳಲ್ಲಿ ಹೇಳುತ್ತಾರೆ. ಅದಕ್ಕೆ ಯಾರು ಹೊಣೆ? ವಿರೋಧ ಪಕ್ಷವೇ? ಬಿಜೆಪಿ ಸರ್ಕಾರಕ್ಕೆ ಯಾವುದೇ ಹೊಣೆಗಾರಿಕೆ ಇಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿಲ್ಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿ, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ.
ಸ್ಫೋಟದ ನಂತರ ರಾಜಧಾನಿ ದಿಲ್ಲಿಯಲ್ಲಿ ಭದ್ರತೆ ಕಠಿಣಗೊಳಿಸಲಾಗಿದ್ದು, ಎನ್‌ಐಎ ಹಾಗೂ ಎನ್‌ಎಸ್‌ಜಿ ತನಿಖೆ ಪ್ರಾರಂಭಿಸಿವೆ. ಘಟನೆಯ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ದಾಳಿ ಆರಂಭಿಸಿವೆ.