×
Ad

‘ಎನ್‍ಎಚ್‍ಎಂ-ಎನ್‍ಯುಎಚ್‍ಎಂ’: ಗುತ್ತಿಗೆ ಸಿಬ್ಬಂದಿಗಳನ್ನು ಮುಂದುವರೆಸುವಂತೆ ಮುಖ್ಯಮಂತ್ರಿಗೆ ಬಿ.ಆರ್. ಪಾಟೀಲ್ ಪತ್ರ

Update: 2025-06-23 21:21 IST

ಬಿ.ಆರ್.ಪಾಟೀಲ್

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‍ಎಚ್‍ಎಂ ಮತ್ತು ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ(ಎನ್‍ಯುಎಚ್‍ಎಂ)ದಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕದೆ, ಕರ್ತವ್ಯದಲ್ಲಿ ಮುಂದುವರೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಪತ್ರ ಬರೆದಿದ್ದಾರೆ.

ರಾಜ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತಸ್ವಾಮಿ ಈ ಸಂಬಂಧ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಶಿಫಾರಸು ಮಾಡುವಂತೆ ವಿನಂತಿಸಿರುವ ಹಿನ್ನೆಲೆಯಲ್ಲಿ ಈ ಪತ್ರ ಬರೆಯುತ್ತಿರುವುದಾಗಿ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೇ?: ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಎಚ್.ಎಂ)ದಡಿ 15-18 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಎನ್‍ಎಚ್‍ಎಂ ಸಿಬ್ಬಂದಿಗಳನ್ನು ಮೌಲ್ಯಮಾಪನ ಮತ್ತು ಅನುದಾನ ಕಾರಣದಡಿ ಕೆಲಸದಿಂದ ದೂರಗೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಶ್ರೀಕಾಂತ ಸ್ವಾಮಿ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಅವರ ಕುಟುಂಬಗಳ ಪರವಾಗಿ ಮುಖ್ಯಮಂತ್ರಿಯ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. ರಾಜ್ಯದಲ್ಲಿ 38 ಸಾವಿರ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ, ಈ ನಿಷ್ಠಾವಂತರ ಸೇವೆಗಳಿಗೆ ಅಡ್ಡಿಪಡಿಸದಂತೆ ಮತ್ತು ನ್ಯಾಯ ಒದಗಿಸುವಂತೆ ವಿನಂತಿಸಿದ್ದಾರೆ ಎಂದು ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.

ಆದುದರಿಂದ, ಈ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದಾರೆ. ಪ್ರಮುಖವಾಗಿ ಎನ್‍ಎಚ್‍ಎಂ, ಎನ್‍ಯುಎಚ್‍ಎಂ ಎಲ್ಲ ಸಿಬ್ಬಂದಿಗಳನ್ನು ಆರ್ಥಿಕ ವರ್ಷ 2025-26ನೆ ಸಾಲಿಗೆ ಮುಂದುವರೆಸುವ ಆದೇಶವನ್ನು ಕೂಡಲೆ ಹೊರಡಿಸಬೇಕು. ಮೌಲ್ಯಮಾಪನದ ಹೆಸರಿನಲ್ಲಿ ಸಿಬ್ಬಂದಿಗಳಿಗೆ ಅನಾವಶ್ಯಕವಾಗಿ ತೊಂದರೆ ಆಗುತ್ತಿದ್ದು, ಈ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಅವರು ಕೋರಿದ್ದಾರೆ.

ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಈ ಸಿಬ್ಬಂದಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತಹ ಆದೇಶ ಹೊರಡಿಸಬಾರದು. ಈಗಾಗಲೇ ಹೊರಡಿಸಿರುವ ಆದೇಶಗಳನ್ನು ಹಿಂದಕ್ಕೆ ಪಡೆಯಬೇಕು. ಅವುಗಳಲ್ಲಿ 24 ಆರ್‍ಬಿಎಸ್‍ಕೆ ತಂಡಗಳನ್ನು ಹಾಗೂ ಈಗಾಗಲೇ ಬಿಡುಗಡೆ ಮಾಡಿರುವ ಫಾರ್ಮಸಿಸ್ಟ್‍ಗಳನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳಬೇಕು. ಆಸ್ಪತ್ರೆ ಡಿಇಒ 1 ಎನ್‍ಎಚ್‍ಎಂ ಅಡಿಯಲ್ಲಿಯೇ ಮುಂದುವರೆಸಬೇಕು ಹಾಗೂ ಆಶಾ ಮೆಂಟರ್‍ಗಳನ್ನು ಅವರ ಇಚ್ಛೆಯಂತೆ ಹುದ್ದೆಗಳನ್ನು ನೀಡಿ ಮುಂದುವರೆಸಬೇಕು ಎಂದು ಬಿ.ಆರ್.ಪಾಟೀಲ್ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News