×
Ad

ʼದುಡ್ಡು ಕೊಟ್ಟವರಿಗಷ್ಟೇ ವಸತಿ ನಿಗಮದಲ್ಲಿ ಮನೆ ಹಂಚಿಕೆʼ : ಕಾಂಗ್ರೆಸ್‌ ಶಾಸಕ ಬಿ.ಆರ್.ಪಾಟೀಲ್‌ರದ್ದು ಎನ್ನಲಾದ ಆಡಿಯೋ ವೈರಲ್‌

Update: 2025-06-20 13:00 IST

 ಬಿ.ಆರ್.ಪಾಟೀಲ್‌\ಸರ್ಫರಾಝ್‌ ಖಾನ್

ಕಲಬುರಗಿ : "ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ದುಡ್ಡು ಕೊಟ್ಟವರಿಗಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ" ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಆಳಂದ ಶಾಸಕ ಬಿ.ಆರ್.ಪಾಟೀಲ್‌, ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ.

ವಸತಿ ಸಚಿವ ಝಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಝ್‌ ಖಾನ್ ಎನ್ನಲಾದವರ ಜೊತೆ ಮೊಬೈಲ್‌ ನಲ್ಲಿ ಹಿಂದಿ ಬಾಷೆಯಲ್ಲಿ ಸಂಭಾಷಣೆ ನಡೆಸಿದ್ದಾರೆ.

ದುಡ್ಡು ಕೊಟ್ಟು ಮನೆಗಳನ್ನು ಹಂಚಲಾಗುತ್ತಿದೆ, ಇದೇನು ದಂಧೆ ನಡೆಯುತ್ತಿದೆಯೋ ಎಂದು ಪ್ರಶ್ನಿಸಿರುವ ಅವರು, ನನ್ನ ಪಕ್ಷ ಮತ್ತು ನಮ್ಮ ಸರಕಾರದ ವಿರುದ್ಧವೇ ಹೇಗೆ ಆರೋಪ ಮಾಡಲಿ? ಒಂದು ವೇಳೆ ನಾನು ಹೊರಗೆ ಬಾಯಿ ಬಿಟ್ಟರೆ ಸರಕಾರವೇ ನಡಗುತ್ತದೆ ಎಂದು ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಕಳುಹಿಸಿರುವ ಲೆಟರ್ ಹೆಡ್‌ನಲ್ಲಿ ಮನೆ ಹಂಚಿಕೆ ಮಾಡಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಒಬ್ಬರು ಹಣ ಕೊಟ್ಟು ಮನೆ ಪಡೆದಿದ್ದಾರೆ ಎಂದು ಫೋನ್ ಕರೆಯಲ್ಲಿ ದೂರಿದ್ದಾರೆ.

ಈ ಮಧ್ಯೆ ಮಾತನಾಡುತ್ತಿದ್ದ ಸರ್ಫರಾಜ್ ಖಾನ್ ಎನ್ನಲಾದವರು , ʼಯಾವ ಕ್ಷೇತ್ರದಲ್ಲಿ ಹೀಗೆ ಆಗಿದೆ ಮಾಹಿತಿ ಕೊಡಿ. ಕೂಡಲೇ ಅವರನ್ನು ಜೈಲಿಗೆ ಕಳುಹಿಸುತ್ತೇವೆʼ ಎಂದು ಹೇಳುತ್ತಿರುವುದು ಅಡಿಯೋದಲ್ಲಿ ದಾಖಲಾಗಿದೆ.

ʼಆಳಂದ ತಾಲ್ಲೂಕು ವ್ಯಾಪ್ತಿಯ ಮುನ್ನಳ್ಳಿಯಲ್ಲಿ 200 ಮನೆ, ದರ್ಗಾ ಶಿರೂರ 100, ಧಂಗಾಪುರದಲ್ಲಿ 200, ಕವಲಗಾದಲ್ಲಿ 200, ಮಾಡಿಯಾಳದಲ್ಲಿ 200 ಮನೆ ಸೇರಿದಂತೆ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ. ಪಕ್ಕದ ಅಫಜಲಪುರ ಕ್ಷೇತ್ರದಲ್ಲಿಯೂ ಹಣ ಪಡೆದೇ ಮನೆಗಳನ್ನು ಹಂಚಿಕೆ ಮಾಡಲಾಗಿದೆʼ ಎಂದು ಆರೋಪಿಸಿದ್ದಾರೆ.

ಶಾಸಕರನ್ನು ಸಮಾಧಾನ ಮಾಡಲು ಯತ್ನಿಸಿದ ಸರ್ಫರಾಜ್, ʼನೀವು ಯಾರ ಹೆಸರುಗಳನ್ನು ಶಿಫಾರಸು ಮಾಡಿದ್ದೀರೋ ಅವರ ಲಿಸ್ಟ್ ಕೊಡಿ ಸರ್. ಅವರಿಗೆ ಮಂಜೂರು ಮಾಡುತ್ತೇವೆ. ಹಣ ಪಡೆದು ಹಂಚಿಕೆ ಮಾಡಿದ್ದರೆ, ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಹೇಳುತ್ತಾರೆ. ಅದಕ್ಕೆ ಶಾಸಕ ಪಾಟೀಲ್ ನಮ್ಮ ಸರಕಾರ ವಿರುದ್ಧವೇ ಈ ರೀತಿ ಮಾತನಾಡುವ ಹಾಗೆ ಆಗಿದೆ ಎಂದು ಹೇಳುತ್ತಾರೆ.

ಈ ವಿಚಾರವನ್ನು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಗಮನಕ್ಕೆ ತಂದಿದ್ದೇನೆ. ಮುಖ್ಯ ಕಾರ್ಯದರ್ಶಿಯ ಗಮನಕ್ಕೂ ತರುತ್ತೇನೆ. ಜನಪ್ರತಿನಿಧಿ ಎಂಬ ಕಾರಣಕ್ಕೆ ನಾನು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರೇ ಕರೆ ಮಾಡಿ ಆಡಿಯೋ ರೆಕಾರ್ಡ್ ಮಾಡಿಕೊಂಡು ಸೋರಿಕೆ ಮಾಡಿದ್ದಾರೆ. ಇದು ಅನೈತಿಕವಾದದ್ದು. ಹಣ ತೆಗೆದುಕೊಂಡು ಮನೆ ಮಂಜೂರು ಮಾಡಿದ್ದರೆ ತಿಳಿಸಿ, ಅಂತಹವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ನಾನು ಅವರೊಂದಿಗೆ ಮಾತನಾಡುವಾಗ ಸ್ಪಷ್ಟವಾಗಿ ಹೇಳಿದ್ದೇನೆ.

-ಸರ್ಫರಾಝ್ ಖಾನ್, ವಸತಿ ಸಚಿವರ ಆಪ್ತ ಕಾರ್ಯದರ್ಶಿ

ಬಿ.ಆರ್.ಪಾಟೀಲ್ ಮಾಡಿರುವ ಆರೋಪಗಳ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಯಾರು ಮನೆಗಳನ್ನು ಮಂಜೂರು ಮಾಡಲು ಲಂಚ ಕೇಳುತ್ತಿದ್ದಾರೋ ಅವರ ವಿರುದ್ಧ ವಸತಿ ಸಚಿವ ಝಮೀರ್ ಅಹ್ಮದ್ ಅವರಿಗೆ ಬಿ.ಆರ್.ಪಾಟೀಲ್ ದೂರು ನೀಡಿದರೆ, ಅವರು ಕ್ರಮ ತೆಗೆದುಕೊಳ್ಳುತ್ತಾರೆ.

-ಡಾ.ಜಿ.ಪರಮೇಶ್ವರ್, ಗೃಹ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News