ನಾನು ಸತ್ಯ ಹೇಳಿದ್ದೇನೆ, ತಪ್ಪೇನಿದೆ? : ವೈರಲ್ ಆಡಿಯೋ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಸ್ಪಷ್ಟನೆ
ಬಿ.ಆರ್.ಪಾಟೀಲ್
ಬೆಂಗಳೂರು : ‘ರಾಜ್ಯದಲ್ಲಿ ಜನಪರ ಆಡಳಿತ ನೀಡುತ್ತೇವೆಂದು ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಕೆಲ ವಿಚಾರಗಳಲ್ಲಿ ತಪ್ಪಾಗಿದ್ದು, ಹೀಗೆ ಆಗಬಾರದಿತ್ತು. ನಾನು ಆಡಿಯೋ ಸಂಭಾಷಣೆಯಲ್ಲಿ ಸತ್ಯವನ್ನು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ?’ ಎಂದು ಶಾಸಕ ಬಿ.ಆರ್.ಪಾಟೀಲ್, ವಸತಿ ಇಲಾಖೆ ಮನೆ ಹಂಚಿಕೆ ಸಂಬಂಧ ತಮ್ಮ ಆಡಿಯೋ ವೈರಲ್ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಡಿಯೋದಲ್ಲಿ ಮತನಾಡಿದ್ದು ನಾನೇ. ಎಲ್ಲ ಸರಕಾರಗಳಲ್ಲೂ ಭ್ರಷ್ಟಾಚಾರ ನಡೆದಿತ್ತು. ಕೆಲ ಪಂಚಾಯಿತಿಗಳಲ್ಲಿ ಹಣವನ್ನು ಕೊಟ್ಟು ವಸತಿ ಇಲಾಖೆಯಿಂದ ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ನಾನು ಪತ್ರ ಕೊಟ್ಟರು ಮನೆಗಳು ಹಂಚಿಕೆ ಆಗಿಲ್ಲ’ ಎಂದು ವಿವರಣೆ ನೀಡಿದರು.
‘ಮನೆ ಮಂಜೂರು ಮಾಡುವಂತೆ ಕೋರಿ ನಾನು ನಾಲ್ಕು ಪತ್ರಗಳನ್ನು ಕೊಟ್ಟಿದ್ದೆ. ನನ್ನ ಕ್ಷೇತ್ರಕ್ಕೆ ಮನೆಗಳನ್ನು ಕೊಟ್ಟಿರಲಿಲ್ಲ. ಪಂಚಾಯಿತಿ ಅಧ್ಯಕ್ಷರು ನಾನು ಕೊಟ್ಟ ಪತ್ರ ಕೊಟ್ಟು ಮನೆ ಮಂಜೂರು ಮಾಡಿಸಿಕೊಂಡಿದ್ದಾರೆ. ನಾನು ಇನ್ನೂ ಎಐಸಿಸಿ ಮಟ್ಟಕ್ಕೆ ಬೆಳೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.