ಮತಗಳ್ಳತನ ಪ್ರಕರಣ | ನಿಷ್ಪಕ್ಷ ತನಿಖೆಗಾಗಿ ಚುನಾವಣಾ ಆಯೋಗವು ಸಿಐಡಿಗೆ ಮಾಹಿತಿ ಒದಗಿಸಲಿ : ಬಿ.ಆರ್.ಪಾಟೀಲ್
ಬಿ.ಆರ್.ಪಾಟೀಲ್
ಬೆಂಗಳೂರು, ಸೆ.19: ಮತಗಳ್ಳತನ ಪ್ರಕರಣದ ನಿಷ್ಪಕ್ಷ ತನಿಖೆಯಾಗಬೇಕಾದರೆ ಸಿಐಡಿ ಕೇಳಿರುವ ಎಲ್ಲ ಮಾಹಿತಿಯನ್ನು ಆಯೋಗ ಒದಗಿಸಬೇಕು ಎಂದು ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ಪ್ರಿನ್ಸಿಪಲ್ ಸೆಕ್ರೆಟರಿ ಅವರಿಗೆ ಪತ್ರ ಬರೆದು, ನಾವು ಎಲ್ಲ ಅಗತ್ಯ ದಾಖಲೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳು ಎಂದು ದೂರಿದರು.
2023ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ಪರವಾಗಿರುವ 6,018 ಮತದಾರರ ಹೆಸರನ್ನು ಕೈಬಿಡಲು ಬೇರೆಯವರಿಂದ ಮನವಿ ಸಲ್ಲಿಸುವಂತೆ ಮಾಡಿದ್ದರು. ಈ ವಿಚಾರ ತಿಳಿದು ನನಗೆ ಗಾಬರಿಯಾಯಿತು. ನಂತರ ನಾನು ಜಾಗೃತರಾಗಿ 10-02-2023ರಂದು ಕಲಬುರಗಿ ಡಿಸಿ ಅವರಿಗೆ ಪತ್ರ ಬರೆದೆ. ನಂತರ 13-02-2023ರಂದು ಆಳಂದ ತಹಶೀಲ್ದಾರ್‍ಗೂ ದೂರು ನೀಡುತ್ತೇನೆ ಎಂದು ವಿವರಿಸಿದರು.
ಈ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲು ಹೋದಾಗ ಎಲ್ಲ ಮಾಧ್ಯಮಗಳಲ್ಲಿ ವರದಿಯಾಗಿದ್ದವು. ನಮ್ಮ ಆರೋಪ ಗಮನಿಸಿದ ಆಯೋಗ ನಮ್ಮ ಆರೋಪದಲ್ಲಿ ಸತ್ಯವಿದೆ ಎಂದು ಹೇಳಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತು. ನಂತರ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ನಕಲಿ ಮನವಿ ಸಲ್ಲಿಕೆಯಾಗಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಳಂದ ಚುನಾವಣಾಧಿಕಾರಿಯೇ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಈ ದೂರಿನ ಆಧಾರದ ಮೇಲೆ ಇಂದು ತನಿಖೆ ನಡೆಯುತ್ತಿದೆ ಎಂದು ಬಿ.ಆರ್.ಪಾಟೀಲ್ ತಿಳಿಸಿದರು.
ಈ ಪ್ರಕರಣವನ್ನು ಸಿಐಡಿಗೆ ನೀಡುವಂತೆ ಗೃಹ ಸಚಿವ ಪರಮೇಶ್ವರ್‌ಗೆ ಮನವಿ ಮಾಡಿದ್ದೆ. ಅವರು ಸಿಐಡಿ ತನಿಖೆಗೆ ವಹಿಸಿದರು. ನಾನು ಸುಮಾರು 10 ಬಾರಿ ಸಿಐಡಿಗೆ ತನಿಖೆ ಬಗ್ಗೆ ವಿಚಾರಿಸಿದೆ. ಆದರೆ ಅವರು ನಮಗೆ ಚುನಾವಣಾ ಆಯೋಗದಿಂದ ಸಹಕಾರ ಸಿಗುತ್ತಿಲ್ಲ. ಹೀಗಾಗಿ ನಾವು ಈ ಪ್ರಕರಣದಲ್ಲಿ ಅಸಹಾಯಕರು ಎಂದು ತಿಳಿಸಿದರು. ಈಗ ಆಂತರಿಕ ತನಿಖೆಗಾಗಿ ಸೈಬರ್ ಅಪರಾಧ ವಿಭಾಗಕ್ಕೆ ನೀಡಲು ಚಿಂತನೆ ನಡೆಸುತ್ತಿದ್ದಾರೆ ಎಂದು ಬಿ.ಆರ್.ಪಾಟೀಲ್ ಹೇಳಿದರು.
ನನ್ನ ಕ್ಷೇತ್ರದಲ್ಲಿ 6,018 ಮತಗಳನ್ನು ತೆಗೆಯಲು ಮನವಿ ಬಂದಿದ್ದು, ಈ ಬಗ್ಗೆ ಆ ಮತದಾರರಿಗೂ ಮಾಹಿತಿ ಇಲ್ಲ. ಯಾರ ಹೆಸರು ತೆಗೆಯಬೇಕಾಗಿದೆಯೋ ಅವರಿಗೂ ಇದರ ಬಗ್ಗೆ ಅರಿವಿಲ್ಲ. ಇಂತಹ ಗೋಲ್ಮಾಲ್ ಮೂಲಕ ನನ್ನನ್ನು ಸೋಲಿಸುವ ಷಡ್ಯಂತ್ರ ರೂಪಿಸಲಾಗಿತ್ತು. ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿ ಈ ಸಂಚು ರೂಪಿಸಿದೆ ಎಂದು ಬಿ.ಆರ್.ಪಾಟೀಲ್ ಆರೋಪಿಸಿದರು.