×
Ad

ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಒಪ್ಪಿಗೆ

Update: 2025-06-12 14:41 IST

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದಂತಹ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಯು ಹತ್ತು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ 1995 ಸೆಕ್ಷನ್ 11 ರಂತೆ ಮರು ಸಮೀಕ್ಷೆ ಕೈಗೊಳ್ಳಲು ಸಚಿವ ಸಂಪುಟವು ಸರ್ವಾನುಮತದ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಅವರು ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು 54 ಮಾನದಂಡಗಳನ್ನು ಇಟ್ಟುಕೊಂಡು ನಡೆಸಲಾಗಿತ್ತು. 2015ರ ಎ.11 ರಂದು ಪ್ರಾರಂಭವಾದ ಸಮೀಕ್ಷೆಯು ಅದೇ ಸಾಲಿನ ಮೇ 30ರಂದು ಮುಕ್ತಾಯವಾಗಿದೆ. ಸುಮಾರು 1.60 ಲಕ್ಷ ಸಿಬ್ಬಂದಿಗಳು ಈ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದರು. 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 6.11 ಕೋಟಿ ಜನಸಂಖ್ಯೆಯಿತ್ತು. ಇದು 2015ರ ವೇಳೆಗೆ 6.35 ಕೋಟಿ ಎಂದು ಅಂದಾಜಿಸಲಾಗಿದೆ. 5.98 ಕೋಟಿ ಜನರು ಸಮೀಕ್ಷೆಗೆ ಒಳಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಾನೂನು ಪ್ರಕಾರ ತೀರ್ಮಾನ: ಎಚ್.ಕಾಂತರಾಜು ನೇತೃತ್ವದ ಆಯೋಗ ಸಮೀಕ್ಷೆ ಮಾಡಿ 10 ವರ್ಷಗಳು ಕಳೆದಿದೆ. ಈ ಅವಧಿಯಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅನೇಕ ಬದಲಾವಣೆಗಳೂ ಆಗಿರುತ್ತವೆ. ಹತ್ತು ವರ್ಷಗಳಾದ ನಂತರ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಕಾನೂನಿನ ಸೆಕ್ಷನ್ 11(1) ರಲ್ಲಿ ಹೇಳಲಾಗಿದೆ. ಪಕ್ಷದ ವರಿಷ್ಠರು ನಮಗೆ ಇದೇ ಸಲಹೆಯನ್ನು ನೀಡಿದ್ದಾರೆ. ಆದುದರಿಂದ, ಕಾನೂನು ಪ್ರಕಾರ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಹಿಂದಿನ ನಮ್ಮ ಸರಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ವರದಿ ಮತ್ತು ಅದರ ಶಿಫಾರಸ್ಸುಗಳು ಅಂತಿಮ ಗೊಂಡಿರಲಿಲ್ಲ. 2018ರಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದರು. ಆ ವೇಳೆಗೆ ವರದಿ ಪೂರ್ಣಗೊಂಡಿತ್ತು ಎಂದು ಅವರು ತಿಳಿಸಿದರು.

ವರದಿ ಪಡೆಯದಂತೆ ತಡೆದ ಎಚ್.ಡಿ.ಕುಮಾರಸ್ವಾಮಿ: ಕಾಂತರಾಜು ಹಾಗೂ ಆಯೋಗದ ಸದಸ್ಯರು ಪುಟ್ಟರಂಗ ಶೆಟ್ಟಿಯನ್ನು ಭೇಟಿ ಮಾಡಿ ವರದಿ ಪಡೆಯುವಂತೆ ಕೋರಿದಾಗ, ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಒತ್ತಡ ಹಾಕಿ ವರದಿಯನ್ನು ಪಡೆಯದಂತೆ ತಡೆದರು. ಕಾಂತರಾಜು ಅವರ ಅವಧಿ ಮುಗಿದ ನಂತರ ಜಯಪ್ರಕಾಶ್ ಹೆಗ್ಡೆಯವರನ್ನು ಬಿಜೆಪಿ ಸರಕಾರ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಸದಸ್ಯರೂ ಬಿಜೆಪಿಯವರೇ ಆಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಜಯಪ್ರಕಾಶ್ ಹೆಗ್ಡೆಯವರು ಸಮೀಕ್ಷೆಯ ದತ್ತಾಂಶಗಳ ಆಧಾರದ ಮೇಲೆ ಸರಕಾರಕ್ಕೆ 2024ರ ಫೆ.29ರಂದು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದರು. ಲೋಕಸಭಾ ಚುನಾವಣೆ ಬಂದಿದ್ದರಿಂದ ವರದಿಯ ಬಗ್ಗೆ ಚರ್ಚೆ ಮಾಡಲು ಆಗಿರಲಿಲ್ಲ. ನಂತರ ವರದಿಯನ್ನು 2025ರಲ್ಲಿ ಸಚಿವ ಸಂಪುಟದಲ್ಲಿ ಮಂಡಿಸಲಾಯಿತು. ಮಂತ್ರಿ ಮಂಡಲದ ಸದಸ್ಯರು ವರದಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಅಂತಿಮವಾಗಿ ಇಂದು ವರದಿಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಕೇಂದ್ರ ಸರಕಾರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಹೇಳಿಲ್ಲ: ಕೇಂದ್ರ ಸರಕಾರ ನಡೆಸಲಿರುವ ಜಾತಿ ಗಣತಿಗಿಂತ ಈ ಸಮೀಕ್ಷೆ ಹೇಗೆ ಭಿನ್ನವಾಗಿ ಇರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಕೇಂದ್ರ ಸರಕಾರವೂ ಎಲ್ಲಿಯೂ ಕೂಡಾ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಹೇಳಿಲ್ಲ. ಆದುದರಿಂದ, ನಾವು ಈ ಸಮೀಕ್ಷೆ ವರದಿ ಅನ್ವಯ ಸಾಮಾಜಿಕ ನ್ಯಾಯ ನೀಡಲು ಬದ್ಧವಾಗಿದ್ದೇವೆ ಎಂದು ಹೇಳಿದರು.

ತೆಲಂಗಾಣ ರಾಜ್ಯದಲ್ಲಿ 70 ದಿನಗಳಲ್ಲಿ ಈ ಸಮೀಕ್ಷೆ ನಡೆಸಿದ್ದಾರೆ. ನಮ್ಮ ರಾಜ್ಯದಲ್ಲಿ 90 ದಿನಗಳ ಒಳಗೆ ಸಮೀಕ್ಷೆ ನಡೆಸಿ, ವರದಿಯನ್ನು ಸಲ್ಲಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಈ ಹಿಂದಿನ ಸಮೀಕ್ಷೆ ಕುರಿತು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳಿಂದ ಆಕ್ಷೇಪಣೆ ಇತ್ತು. ಈ ಸಮೀಕ್ಷೆಯಲ್ಲಿ ಆ ಸಮುದಾಯಗಳಿಗೆ ಯಾವ ರೀತಿ ಭರವಸೆ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಸೆಕ್ಷನ್ 11 ರಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉಪಸ್ಥಿತರಿದ್ದರು.

ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ: ಮುಖ್ಯಮಂತ್ರಿ

ಜಾತಿ ಗಣತಿಯ ಮರು ಸಮೀಕ್ಷೆಗೆ ಸಂಬಂಧಿಸಿದಂತೆ ಬಿಜೆಪಿಯ ಯಾವೊಬ್ಬ ನಾಯಕರ ಆರೋಪಗಳಿಗೂ ಈ ಹಂತದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ಮುಂದಿನ ದಿನಗಳಲ್ಲಿ ಅವರ ಎಲ್ಲ ಆರೋಪಗಳಿಗೂ ಉತ್ತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News