ಅತೀ ಹಿಂದುಳಿದ ಅಲ್ಪಸಂಖ್ಯಾತರ ಕಾಲನಿಗಳನ್ನು 398 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ: ಸಚಿವ ಸಂಪುಟ ಸಭೆ ನಿರ್ಧಾರ
ಬೆಂಗಳೂರು: ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತೀ ಹಿಂದುಳಿದ ಕಾಲನಿಗಳನ್ನು ಮಾದರಿ ಕಾಲನಿಗಳನ್ನಾಗಿ ಅಭಿವೃದ್ಧಿಪಡಿಸಲು 398 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇತರ ನಿರ್ಣಯಗಳು:
ರಾಜ್ಯ ಸರಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯ ವಿಮಾದಾರರಿಗೆ 2020-22ರ ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ 80 ರೂ.ಗಳಂತೆ ಲಾಭಾಂಶ (ಬೋನಸ್) ಘೋಷಣೆ.
‘ಶುಚಿ’ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್‍ಗಳನ್ನು 71.83 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಮತ್ತು ವಿತರಣೆ ಮಾಡಲು ಹಾಗೂ ‘ಆಶಾಕಿರಣ’ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 52.85 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
ಕನಕಪುರದಲ್ಲಿ ವೈದ್ಯಕೀಯ ಕಾಲೇಜು:
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಮೊದಲನೆ ಹಂತದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ 65 ಕೋಟಿ ರೂ.ಗಳ ವೆಚ್ಚದಲ್ಲಿ 25 ಎಕರೆ ಜಮೀನು ಖರೀದಿಸಲು ಆಡಳಿತಾತ್ಮಕ ಅನುಮೋದನೆ.
ಶಾಲಾ ಮಕ್ಕಳಿಗೆ ರಾಗಿ ಹೆಲ್ತ್ ಮಿಕ್ಸ್ ಪುಡಿ:
ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೆ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಬಿಸಿ ಹಾಲಿನೊಂದಿಗೆ ವಾರದಲ್ಲಿ ಐದು ದಿನಗಳಿಗೆ ಮಿಶ್ರಣ ಮಾಡಿ ನೀಡಲು ರಾಜ್ಯ ಸರಕಾರದಿಂದ ಭರಿಸಬೇಕಾಗಿರುವ ಶೇ.25ರಷ್ಟು ವೆಚ್ಚದ ಅಂದಾಜು ಮೊತ್ತ 20.53 ಕೋಟಿ ರೂ.ಗಳನ್ನು ಪಾವತಿಸಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಮತ್ತು ಅಂದಾಜು ಸಾಗಾಣಿಕಾ ವೆಚ್ಚ 6.49 ಕೋಟಿ ರೂ.ಗಳನ್ನು ಕರ್ನಾಟಕ ಹಾಲು ಮಹಾಮಂಡಳಿಗೆ ಪಾವತಿಸಲು ಅನುಮೋದನೆ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಳಗೊಂಡನಹಳ್ಳಿ, ಕುರುಬರಹಳ್ಳಿ, ಅಣ್ಣಿಗೆರೆ ಮತ್ತು ವೈ.ಮಲ್ಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆಯ ಕಾಮಗಾರಿಗಳಿಗೆ ಅಗತ್ಯವಿರುವ ಸುಮಾರು 221 ಎಕರೆ 01.12 ಗುಂಟೆ ಜಮೀನನ್ನು 77.35 ಕೋಟಿ ರೂ. ಮೊತ್ತದಲ್ಲಿ ನೇರ ಖರೀದಿಯ ಮೂಲಕ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರನ್ನು ಎತ್ತಿ ತುಂಬಿಸುವ ಯೋಜನೆಯನ್ನು 179.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹಾಗೂ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯ ಮುಖಾಂತರ ಬ್ಯಾಡಗಿ ಮತ್ತು ಹಾನಗಲ್ ತಾಲೂಕಿನ 137 ಕೆರೆ ತುಂಬಿಸುವ 115.60 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನುಸರಣೀಯ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಹಂತವಾರು ಅನುಷ್ಠಾನಕ್ಕಾಗಿ ತಾತ್ವಿಕ ಅನುಮೋದನೆ ಹಾಗೂ ವಿವಿಧ ಸೇವಾ ಪೂರೈಕೆದಾರರೊಂದಿಗೆ ಪ್ರತಿ ವಹಿವಾಟಿನ ಪಾವತಿ ಆಧಾರದ ಮೇಲೆ ಮೊದಲನೇ ಹಂತದ ಅನುಷ್ಟಾನಕ್ಕೆ (ವಾರ್ಷಿಕ ಅಂದಾಜು ವೆಚ್ಚ 20.60 ಕೋಟಿ ರೂ.ಗಳು) ಆಡಳಿತಾತ್ಮಕ ಅನುಮೋದನೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ 50 ಹಾಸಿಗೆಗಳ ಸಾಮಥ್ರ್ಯದ ತೀವ್ರ ನಿಗಾ ಘಟಕ ನಿರ್ಮಾಣ ಕಾಮಗಾರಿಯನ್ನು 24.22 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ. 2025ರ ರಸ್ತೆ, ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸೆ ಯೋಜನೆ ಅಡಿಯಲ್ಲಿ ಭಾರತ ಸರಕಾರದ 1.50 ಲಕ್ಷ ರೂ.ನೆರವಿನ ಜೊತೆಗೆ, ಅಪಘಾತ ಸಂತ್ರಸ್ತರ ಯೋಜನೆಯಡಿಯಲ್ಲಿ 1 ಲಕ್ಷ ರೂ. ರಾಜ್ಯ ನೆರವು ಒದಗಿಸಲು ನಿರ್ಧಾರ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ 63.34 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೆ ಹಾಗೂ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 100 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ಜನಾಂಗದವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪಿಎಂ-ಜನ್‍ಮನ್ ವಸತಿ ಯೋಜನೆಯಡಿ 1,580 ಮನೆಗಳನ್ನು ಜೇನು ಕುರುಬ ಮತ್ತು ಕೊರಗ ಸಮುದಾಯದವರಿಗೆ 30 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹಾಗೂ ಅರಣ್ಯ ಪ್ರದೇಶಗಳ ಹಾಡಿಗಳಲ್ಲಿ ಅತ್ಯಂತ ಕ್ಲಿಷ್ಟಕರ ಹಾಗೂ ತುರ್ತು ಸಂದರ್ಭದಲ್ಲಿ ಸಂಪರ್ಕ ರಸ್ತೆ / ಇತ್ಯಾದಿ ಮೂಲಭೂತ ಸೌಕರ್ಯಗಳನ್ನು 10 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಹೊಸ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಕಾಮಗಾರಿಗಳನ್ನು 73.75 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ರಾಯಚೂರು ಗ್ರಾಮೀಣ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಹೊಸ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು 147.50 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಿಗೆ 84 ಕೋಟಿ ರೂ.ಗಳ ಮೊತ್ತದಲ್ಲಿ ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಖರೀದಿಸಲು ಮತ್ತು ಹೆಚ್ಚುವರಿ ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯಗಳನ್ನು 21 ಕೋಟಿ ರೂ.ಗಳ ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
‘ಕರ್ನಾಟಕ ಎಲೆಕ್ಟ್ರಾನಿಕ್ ಪ್ರಕ್ರಿಯೆಗಳು (ವಿತರಣೆ), ಸೇವೆ ಮತ್ತು ಕಾರ್ಯಗತಗೊಳಿಸುವಿಕೆ) ನಿಯಮಗಳು, 2025’, ‘ಕರ್ನಾಟಕ ಇ-ಸಾಕ್ಷ್ಯ ನಿರ್ವಹಣಾ ನಿಯಮಗಳು, 2025’, ‘ಕರ್ನಾಟಕ ಪೊಲೀಸ್ ಅಧಿಕಾರಿಗಳಿಂದ ಸಮನ್ಸ್ ಸೇವೆಯ ನಿಯಮಗಳು, 2025’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.